ಬೆಂಗಳೂರು: ನಾನ್ ಯುಜಿಸಿ ಪದವಿ ಕಾಲೇಜು ಅತಿಥಿ‌ ಉಪನ್ಯಾಸಕರ ಸೇವೆ ಮುಂದುವರೆಸಲು ಡಿಸಿಇ ಆಯುಕ್ತರಿಗೆ ಮನವಿ

ಬೆಂಗಳೂರು, ಅ.3: ಕಳೆದ ಹದಿನೈದು- ಇಪ್ಪತ್ತು‌ ವರ್ಷಗಳಿಂದ ರಾಜ್ಯದ ಸರಕಾರಿ ಪದವಿ ಕಾಲೇಜುಗಳಲ್ಲಿ ‌ಕಾರ್ಯನಿರ್ವಹಿಸುತ್ತಿರುವ ಯುಜಿಸಿ ಶೈಕ್ಷಣಿಕ‌ ಅರ್ಹತೆ ಇಲ್ಲದ ಪದವಿ ಅತಿಥಿ ಉಪನ್ಯಾಸಕರ ಸೇವೆಯನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಜಗದೀಶ್ ಅವರಿಗೆ ನೂರಾರು ಅತಿಥಿ ಉಪನ್ಯಾಸಕರು‌ ಗುರುವಾರ ಮನವಿ ಸಲ್ಲಿಸಿದರು.

ರಾಜ್ಯದ ವಿವಿಧ ಭಾಗಗಳಿಂದ ನಗರಕ್ಕೆ ಆಗಮಿಸಿದ್ದ
ಅತಿಥಿ ಉಪನ್ಯಾಸಕರಾದ ಲೋಕೇಶ್ ಪಿ.ಸಿ, ಆರೀಫ್ ಕಾರ್ಲೆ, ಜಿ. ವಿ. ರಮೇಶ್, ಟಿ.ರುದ್ರಮುನಿ, ಅಕ್ಕಿ‌ ಮಲ್ಲಿಕಾರ್ಜುನ, ಭರತ ಕುಮಾರ್, ಡಿ. ಸಿದ್ದೇಶ್, ವಿಜಯ ಕುಮಾರ್, ಶಿವಣ್ಣ, ರಾಜೇಶ್ ಗೌಡ, ಸೇರಿದಂತೆ ಹಲವು ‌ಮುಖಂಡರ‌ ನೇತೃತ್ವದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಜಗದೀಶ್ ಅವರನ್ನು ಭೇಟಿ ಮಾಡಿ ತಮ್ಮ ಪ್ರಮುಖ‌ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು.
ಸರಕಾರಿ ಪದವಿ ಕಾಲೇಜುಗಳಲ್ಲಿ ಕ್ರಮವಾಗಿ ಕಳೆದ‌ 20-15-10-8-5-4-2-1 ವರ್ಷದಿಂದ‌ ಕಾರ್ಯನಿರ್ವಹಿಸುತ್ತಿರುವ 5800ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿಗೆ ಉದ್ಯೋಗವಿಲ್ಲದಿದ್ದರೆ ಇವರ ಕುಟುಂಬಗಳು ಬೀದಿ‌ಪಾಲಾಗುತ್ತವೆ. ಸರಕಾರ ಮಾನವೀಯತೆ ದೃಷ್ಟಿಯಿಂದ ಇವರನ್ನು ಮುಂದುವರೆಸ‌ಬೇಕು ಎಂದು ಮನವಿ ಮಾಡಿದರು.
ಪಿಯುಸಿ ಉಪನ್ಯಾಸಕರಿಗೆ‌ ನೀಡಿದಂತೆ  ಅಗತ್ಯ ಶೈಕ್ಷಣಿಕ ಅರ್ಹತೆ ಪಡೆಯಲು ಕನಿಷ್ಟ ಐದು ವರ್ಷ ಅವಕಾಶ ನೀಡಬೇಕು. ಯುಜಿಸಿ ಶೈಕ್ಷಣಿಕ ಶಿಕ್ಷಣ ಅರ್ಹತೆ ಇರಬೇಕು ಎನ್ನುವ ಉಚ್ಚ ನ್ಯಾಯಾಲಯದ ಮಧ್ಯಂತರ ನಿರ್ದೇಶನಕ್ಕೆ‌ ಮೇಲ್ಮನವಿ‌‌‌ ಸಲ್ಲಿಸಬೇಕು ಎಂದು ಅತಿಥಿ‌ ಉಪನ್ಯಾಸಕರು ಒತ್ತಾಯಿಸಿದರು.
ತಮ್ಮ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿದ ಆಯುಕ್ತರು ತಮಗೆ ನ್ಯಾಯ ಒದಗಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು ಎಂದು ಲೋಕೇಶ್ ಅವರು ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಲೋಕೇಶ್ವರಪ್ಪ, ಸುನೀತಾ, ಜಯರಾಂ ಟಿ, ವಿಷ್ಣು‌‌ ಹಡಪದ, ಎರ್ರಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
—–