ಅನುದಿನ ಕವನ-೧೩೭೩, ಹಿರಿಯ‌ ಕವಿ: ಹುರಕಡ್ಲಿ ಶಿವಕುಮಾರ್, ಬಾಚಿಗೊಂಡನಹಳ್ಳಿ, ವಿಜಯನಗರ ಜಿಲ್ಲೆ, ಕವನದ ಶೀರ್ಷಿಕೆ: ಬೀಳ್ಕೊಂಡೆನಯ್ಯಾ…..

ಬೀಳ್ಕೊಂಡೆನಯ್ಯಾ…..

ಸದಾ ಪಾಪಪುಣ್ಯವೆಂದು
ವಟಗುಡುತ್ತಾ
ಪೀಳಿಗೆ ಪೀಳಿಗೆಯನ್ನೇ
ಭ್ರಮಾಧೀನಗೊಳಿಸುತ್ತಾ
ಕತ್ತಲ ಕೋಣೆಯಲ್ಲಿ ಲೋಲಾಡುವ
ಸ್ವಾಮಿಗಳನ್ನು ಕಂಡೆನಯ್ಯಾ!

ಬೂಸಾ ಸಾಹಿತ್ಯವನ್ನೇ
ಹೊಸೆದರೂ
ವಶೀಲಿ ಬಾಜಿಯಿಂದಲೇ
ಪ್ರಶಸ್ತಿ ಪಡೆದರೂ
ಧೀಮಂತನಂತೆಯೇ
ಪೋಜು ಕೊಡುವ
ಸಾಹಿತಿಯನ್ನು ಕಂಡೆನಯ್ಯಾ!

ದೇಶವನ್ನೇ ಬಾಧಿಸುವ
ಬಡತನವ ನೋಡಿ
ಅದರ ನಿರ್ಮೂಲನೆಗಾಗಿ
ನನಗೇ ಓಟು ಕೊಡಿ
ಎನ್ನುತ್ತಾ
ತನ್ನ ಬಡತನವನ್ನಷ್ಟೇ ನೀಗಿಸಿಕೊಂಡ
ಭಂಡ ರಾಜಕಾರಣಿಯನ್ನೂ ಕಂಡೆನಯ್ಯಾ !
ಕಂಡು ಅವರ ಬಳಿ ನಿಲ್ಲಲಾಗದೆ
ಬೀಳ್ಕೊಂಡೆನಯ್ಯಾ ಪ್ರಾಮಾಣಿಕೇಶ್ವರಾ..!

-ಹುರಕಡ್ಲಿ ಶಿವಕುಮಾರ್, ಬಾಚಿಗೊಂಡನಹಳ್ಳಿ
—–