ಅಮ್ಮ
ಅಮ್ಮಎಂದು ಕೂಗಿದೊಡನೆ
ಓಡಿ ಬಂದು ಎತ್ತಿಕೊಂಬ
ತಾಯಿಗಿಂತ ದೈವ ಉಂಟೆ
ಹೇಳು ಮನುಜನೆ!!
ನವಮಾಸ ಹೊತ್ತು ಕೊಂಡು
ಗರ್ಭದೊಳಗೆ ಪಾಠ ಮಾಡಿ
ಲೋಕದೊಳಗೆ ಬಿಟ್ಟ ತಾಯಿ
ದೇವರಲ್ಲವೇ !!!
ಆಸೆ ನೂರು ಇಟ್ಟುಕೊಂಡು
ಬಾಳು ಪೂರ್ಣ ದುಡಿವ ತಾಯಿ
ತನ್ನ ಕರುಳು ಬಳ್ಳಿಯನ್ನು
ಸಾಕಲಿಲ್ಲವೆ!!
ರೋಗ ಬಂದು ನರಳುತ್ತಿರುಲು
ಅಮ್ಮ ಅಮ್ಮ ಎನ್ನುತ್ತಿರಲು
ದೈವರೂಪಿ ತಾಯಿ ಬಂದು
ನೋಡಲಿಲ್ಲವೇ!!
ಎದೆಯ ಹಾಲು ಕುಡಿಸಿ ಬೆಳೆಸಿ
ವೀರ ಧೀರ ಎಂದು ಕರೆದು
ನೂರು ಹರಕೆ ಹೊತ್ತವರು
ಅವ್ವನಲ್ಲವೇ!!
ಇರುವೆ ಗೂಡು ಕೆರೆದುಕೊಂಡು
ಬೀದಿಯಲ್ಲಿ ನಾನು ಅಳಲು
ಓಡಿ ಬಂದು ಮುತ್ತು ಕೊಟ್ಟ
ದೈವವಲ್ಲವೆ!!
ತಾಯಿಗಿಂತ ದೇವರುಂಟೆ
ಉಪ್ಪಿಗಿಂತ ರುಚಿಯುಂಟೆ
ಎಷ್ಟು ತೀರ್ಥ ಕುಡಿದರೆನೋ
ಮೂಢ ಮನುಜನೆ!!
ಎದೆ ಹಾಲು ಸವಿಯನುಂಡು
ತಾಯಿಯನ್ನು ಜರಿವ ಮಗನು
ಭೂಮಿ ಮೇಲೆ ಇದ್ದರೇನು
ವ್ಯರ್ಥವಲ್ಲವೇ!!
ಭಾವಪೂರ್ಣ ಮನದಿ ನಾನು
ತಾಯಿಯನ್ನು ಸ್ಮರಣೆಗೈದು
ಅವಳ ಪಾದ ಕಮಲದಲ್ಲಿ
ಶಿರವಬಾಗುವೆ!!!
-ನಾದಾನಂದನಾಥ ಸ್ವಾಮೀಜಿ, ಮೈಸೂರು
—–