ಎದೆಯಲ್ಲಿ ಕಿಚ್ಚಿತ್ತು ನಾನು ಬೆಂಕಿಯ ಬಗ್ಗೆ ಬರೆದೆ ಹಾಳೆ ಸುಟ್ಟು ಬೂದಿಯಾಯಿತು
ಕಣ್ಣಲ್ಲಿ ಪ್ರವಾಹವಿತ್ತು
ನಾನು ನೀರಿನ ಬಗ್ಗೆ ಬರೆದೆ
ಹಾಳೆ ಒದ್ದೆಯಾಗಿ ಮುದುಡಿ ಹೋಯಿತು
ಉಸಿರಲ್ಲಿ ಬಿರುಗಾಳಿಯಿತ್ತು
ನಾನು ಗಾಳಿಯ ಬಗ್ಗೆ ಬರೆದೆ
ಹಾಳೆ ಹಾರಿ ಹರಿದು ಹೋಯಿತು
ತಿಳಿಯುವುದಿಲ್ಲ ನನಗೆ
ಕೆಲವರು ಹೇಗೆ ಬರೆಯುತ್ತಾರೆ ಎಂದು
ಚಿತೆಯ ಮೇಲಿದ್ದೂ
ಹಾಳೆಗೆ ಬಿಸಿಯೂ ಸೋಂಕದಂತೆ
ಪ್ರವಾಹದಲ್ಲಿ ಮುಳುಗಿದ್ದೂ
ಹಾಳೆಗೆ ತೇವವೂ ತಾಕದಂತೆ
ಬಿರುಗಾಳಿಯಲ್ಲಿದ್ದೂ
ಹಾಳೆಯ ಅಂಚೂ ಕಂಪಿಸದಂತೆ
ಅರ್ಥವಾಗುವುದಿಲ್ಲ ನನಗೆ
ಅಂಥವರ ಮುಂದೆ ಖಾಲಿ ಪುಟಗಳೇಕೆ
ಸಾಲುಗಟ್ಟಿ ನಿಲ್ಲುತ್ತವೆ ಎಂದು
ಕ್ಷಮಿಸಿ,
ನನಗೆ ಕವಿತೆ ಬರೆಯಲು ಬರುವುದಿಲ್ಲ
ಹಾಳೆಗೆ ಕೊಂಚವೂ ನೋವಾಗದ ಹಾಗೆ.
– ವಿಲ್ಸನ್ ಕಟೀಲ್, ಮಂಗಳೂರು
—–