ಅನುದಿನ ಕವನ-೧೩೭೮, ಹಿರಿಯ ಕವಿ: ಸಿದ್ದು ಯಾಪಲಪರವಿ, ಗದಗ, ಕವನದ ಶೀರ್ಷಿಕೆ:ಉತ್ಸವಗಳಿಗಾಗಿ ಕವಿ ಆಗಿನಿ

ಉತ್ಸವಗಳಿಗಾಗಿ ಉತ್ಸಾಹದಿಂದ ಕವಿ ಆಗಿನಿ

ಕವಿ ಆಗೋಣ ಬರ್ರಿ ಕೇಳೋ
ಕಿವಿಗಳು ಇಲ್ಲಂದ್ರ ಏನಾತು
ಉತ್ಸವಗಳಿಗೆ ಓದಾಕ ನೀವು ಛಲೋತ್ನ್ಯಾಗ
ಊದರಿ ಭಾಜಾ ಭಜಂತ್ರಿನ

ಭಾಳ ಛಲೋ ಟಿಎ ಕೊಡತಾರಂತ
ದೊಡ್ಡ ಹೋಟೆಲ್ದಾಗ ಇಳಸ್ತಾರಂತ
ಯಾರ ಕೇಳಿದ್ರೇನು ಬಿಟ್ರೇನು ವ್ಹಾ ವ್ಹಾ
ಅನದಿದ್ರೂ ಚಿಂತಿ ಇಲ್ಲ ನಾ
ಕವಿ ಆಗೇ ಆಕ್ಕೀನಿ

ಲಾಬಿ ಮಾಡಿ ಗುಲಾಬಿ ಕೊಡ್ತೀನಿ
ಬೇಕಿದ್ರ ಅಲ್ಪ ಸ್ವಲ್ಪ ರೊಕ್ಕಾನೂ…
ಒಟ್ ನಾ ಕವಿಯಾಗಿ ಕವಿತಾ ಒದ್ತೀನಿ

ಉತ್ಸವಗಳ ಸಲುವಾಗಿ ಒಂದ್ ನೂರು
ಸಂಕಲನಾನೂ ಪ್ರಿಂಟ್ ಮಾಡ್ಸಿ ನಮ್ಮ
ಲೀಡರ್ ಕಡೆ ಹೇಳ್ಸೀನಿ ಏನರ ಮಾಡಿ
ನಾ ಕವಿತಾ ಓದೇ ಒದ್ತೀನಿ

ಹೆಂಗ ಓದಿದ್ರ ಚಂದ ಅನಿಸ್ತೈತಿ ಅಂತ
ಹತ್ತಾರ ಸಲ ಓದಿ ಪ್ರ್ಯಾಕ್ಟೀಸ್ ಮಾಡಿನಿ
ಗೆಳೆಯರ ಮುಂದ, ಹಿಂದ, ಮತ್ ಮ್ಯಾಲೆ

ಹೊಸ ಅಂಗಿ ಹೊಲಿಸಿ ಮ್ಯಾಲೊಂದು
ಜಾಕೇಟು ತಗೊಂಡಿನಿ ಚಂದ ಮಿಂಚಾಕ
ಈಗಿರುವ ಸರ್ಕಾರಕ್ಕ ಸೂಟ್ ಆಗೋ
ಸಿದ್ಧಾಂತಗಳ ಪ್ಯಾಂಟೂ ಹಾಕ್ಕೋತಿನಿ

ನಾಚಿಗಿ ಮಾನ ಸ್ವಾಭಿಮಾನಿ ಬಿಟ್ರ
ಕವಿ ಆಕ್ಕಿರಿ ಸಾಹಿತಿ ಆಕ್ಕಿರಿ ಮಹಾನ್
ಕಲಾವಿದಾನೂ

ಇರೋ ಒಂದ ಒಂದು ಕವಿತಾನ
ಅಲ್ಲಿ ಇಲ್ಲಿ ಎಲ್ಲಾ ಕಡೆ ಓದ್ತೀನಿ
ಯಾರಿಗೆ ಏನ ನೆನಪಿರ್ತ ಹೇಳ್ರಿ!?

ಹೋಗು ಮುಂದ ಕರದವರಿಗೆ ಇರ್ಲಿ
ಅಂತ ಇಲಕಲ್ಲ ಸೀರಿ, ಧಾರವಾಡ ಪೇಡಾನೂ ಒಯ್ತೀನಿ ಅವರ ಮತ್ತ
ಮುಂದ ಎದಕರ ಹಾಕ್ಲಿ ಅಂತ

ಹಿಂಗ ಅಪದ್ ಗದ್ಯತಂತಹ ಪದ್ಯ
ಬರದು ನಿಮ್ಮ ತೆಲಿ ತಿಂದು ನಿಮ್ಮನ್ನ
ಬರಬಾದು ಮಾಡಿ ಖುಷಿ ಪಡ್ತೀನಿ
ಯಾಕಂದ್ರ ನಾ ಭಾಳ ಭಾಳ
ದೊಡ್ಡ ಕವಿ ಅದಿನಿ ಮುಂದ ಮುಂದ
ಮುಂದ ಒಡಾಡಿಕೊಂತಾನ ಇರ್ತೀನಿ…

-ಸಿದ್ದು ಯಾಪಲಪರವಿ, ಗದಗ