ಅನುದಿನ ಕವನ-೧೩೮೬, ಕವಯಿತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ: ಗೊತ್ತೇ ಇರಲಿಲ್ಲ ……

ಗೊತ್ತೇ ಇರಲಿಲ್ಲ ……

ಗೊತ್ತೇ ಇರಲಿಲ್ಲ…..
ನೀನಿಷ್ಟು ಛಲಗಾರನೆಂದು
ಗಟ್ಟಿ ಹಟದವನೆಂದು ಪಟ್ಟು ಬಿಡದವನೆಂದು
ನಾನೂ ಹಟಮಾರಿಯೇ ಆದರೂ
ಆ ಹಟಕ್ಕೆ ಮೆತ್ತಗೆ ಬಾಗುವ ಕೋಮಲತೆ ಇದೆ

ಗೊತ್ತೇ ಇರಲಿಲ್ಲ……
ನೀನಿಷ್ಟು ಗಡಸು ಗುಂಡಿಗೆಯ
ವಜ್ರಾದಪಿ ಕಠೋರ ಮೌನದ
ಇಷ್ಟೆತ್ತರದ ಬೆಟ್ಟದಷ್ಟೇ ಧೃಡತೆಯವನೆಂದು
ನಾನೂ ಬಲು ಗಡಸುಗಾತಿಯೇ
ಆದರೆ ಅದು ಹೇಗೆ ಕರಗಿದೆ
ನಿನ್ನ  ಆ  ಅಳ್ಳಕವಾಗದ ಹೃದಯದ ಬಿಸುಪಿಗೆ
ತಿಳಿಯಲೇ ಇಲ್ಲ

ಗೊತ್ತೇ ಇರಲಿಲ್ಲ……
ನಿನ್ನ ಮೌನದಲಿ ನಾ ಅರಸಬಹುದು
ಒಲವಿನ ಧ್ವನಿಯನೊಂದೊಮ್ಮೆ ಎಂದು
ಅದರಲಡಗಿದ ನಾದದಿಂಪಿಗೆ ನಾ ತಳಮಳದಿ ಕಾಯಬಹುದೆಂದು
ನನ್ನ ಬೆಪ್ಪು ಮನಕೊಂದು  ಪೆದ್ದು ಆಸೆ
ತಿವಿಯುತಿದೆ ಬಿಡದೆ ನೀ ತಪ್ಪಿದೆ ಎಲ್ಲೊ
ನೋಡು ಬದಲಿಸಿ ಬಿಡು ಯೋಚನೆಯ ದಿಕ್ಕೆಂದು
ಹೇಗಂತ ತಿಳಿಯಲೇ ಇಲ್ಲ

ಆದರೆ  ಇಷ್ಟು ಗೊತ್ತಾಯ್ತು….
ಈಗ  ನನಗೆ ಒಂದೇ ಬಯಕೆ ಎಂದು
ಒಂದು ಬಾರಿ ನಿನ್ನ ಕಣ್ಣಲ್ಲಿ ಕಣ್ಣಿಟ್ಟು
ಆ  ಮಿಂಚುವ ಬೆಳಕಲಿ  ಪೂರಾ ಕರಗಿ ಹೋಗಿ
ದ್ರವಿಸಲು ಕಾಯುತಿದೆ ಕಾತರದಿ
ನಿನ್ನ ಒಂದೇ ಒಂದು ಮಾತಿಗೆ
ಹೌದು ಒಂದೇ ಒಂದು ಮಾತಿಗೆ ಈ ಜೀವ ಎಂದು

-ಸರೋಜಿನಿ ಪಡಸಲಗಿ, ಬೆಂಗಳೂರು
ಬೆಂಗಳೂರು

One thought on “ಅನುದಿನ ಕವನ-೧೩೮೬, ಕವಯಿತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ: ಗೊತ್ತೇ ಇರಲಿಲ್ಲ ……

Comments are closed.