ಮೊಂಬತ್ತಿ ಬೆಳಕಲ್ಲಿ ಸತ್ಯದ ಹುಡುಕಾಟ
ಸತ್ಯ ಎಲ್ಲೋ ಅವಿತುಕೊಂಡಿದೆ ಮೂಲೆಯಲ್ಲಿ
ಬೆಳಕು ಸಾಲುತ್ತಿಲ್ಲ
ಮೊಂಬತ್ತಿ ಹಿಡಿದು ಸತ್ಯ ಹುಡುಕುವವರ ಕಣ್ಣುಗಳು ಮಸುಕು ಮಸುಕು
ನಾನಿಲ್ಲಿರುವೆ ಬಾ ಎಂದು ಸತ್ಯ ಕಿರುಚುತ್ತಿದೆ
ಸತ್ಯವನ್ನು ಯಾರೋ ಬಲವಾಗಿ ಕಟ್ಟಿ ಹಾಕಿದ್ದಾರೆ
ಆ ಕಡೆ ಇವರು ಹೊರಳಿಯೂ ನೋಡುತ್ತಿಲ್ಲ
ಹುಡುಕುವವರಿಗೆ
ಜಾಣ ಕಿವುಡು
ಜಾಣ ಕುರುಡು..
ಹೊಟ್ಟೆಗೆ ಅನ್ನ ತಿಂದು ಹುಡುಕಿದ್ದರೆ ಸತ್ಯ ಸಿಗುತ್ತಿತ್ತು
ಕಾರ್ಗತ್ತಲಲ್ಲಿದ್ದರೂ ಗೋಚರಿಸುತ್ತಿತ್ತು
ಕಂಠಪೂರ್ತಿ ಹೇಸಿಗೆಯ ಕಾಸು ತಿಂದು ಹುಡುಕಲು ಬಂದಿದ್ದಾರೆ
ಸತ್ಯದ ಕತ್ತು ಹಿಚುಕಲು ಕಾಸುಕೊಟ್ಟವ ಜೈಲಿನ ಸರಳುಗಳ ಹಿಂದೆ ಕಿಸಕ್ಕನೆ ನಕ್ಕ
ಬಂಧನದ ಬೇಡಿಗಳು ಸಡಿಲಗೊಂಡವು..
ಇತ್ತೀಚೆಗೆ ಬೇಡಿಗಳಿಗೂ ಕಾರಾಗೃಹದ ಸರಳುಗಳಿಗೂ ತುಕ್ಕಿನ ರೋಗ
ಕಿಸೆಗಳ್ಳರ ಕೈಗಳಿಗೆ ಬಲವಾದ ಕೈ ಕೋಳಗಳು
ತೋಳ ತಿಮಿಂಗಲಗಳಿಗೆ ತುಕ್ಕು ಹಿಡಿದ ಬೇಡಿಗಳು
ಮೊಂಬತ್ತಿ ಹಚ್ಚಿಕೊಂಡು ಹುಡುಕಿದವರು ಹೊರಬಂದರು
ಸತ್ಯ ಸಿಗಲೇ ಇಲ್ಲ
ಸುಳ್ಳು ಇದೆಲ್ಲಾ ಅಂದುಬಿಟ್ಟರು
ಲಾಂಛನಧಾರಿ ಮುಗುಳ್ನಕ್ಕ
ಬೇಡಿ ತಾನಾಗಿಯೇ ಸಡಿಲಗೊಂಡಿತು
ಹೊರಗೆ ಜನಸ್ತೋಮ
ಅದ್ದೂರಿ ಮೆರವಣಿಗೆ
ಜಯಘೋಷ
ಪಟಾಕಿಗಳ ಸದ್ದು
ಕೊಂಬು ಕಹಳೆಗಳು
ಅದ್ದೂರಿ ಮೆರವಣಿಗೆ…
ಸತ್ಯದ ಕಥೆ ಮುಗಿಯಿತು
ಕಟ್ಟಿ ಹಾಕಿದಲ್ಲಿಯೇ ಕನಲಿ ಕನಲಿ ಸತ್ಯ ಸತ್ತೇ ಹೋಯಿತು
-ಮಹಿಮ, ಬಳ್ಳಾರಿ