ಫಿಲ್ಟರ್’ ಆಗದ ಚಿತ್ರವೊಂದರ
ಹುಡುಕಾಟದಲ್ಲಿದ್ದೇನೆ
ಈಗಿಲ್ಲಿ ಆಕಾಶ, ಚಂದ್ರ, ಹಕ್ಕಿ, ಹೂವು
ಸೂರ್ಯೋದಯ, ಚಂದ್ರೋದಯ
ಎಲ್ಲವೂ ಫಿಲ್ಟರ್ ಆಗಿದೆ!
ಫ್ರೆಶ್, ಕ್ಲಿಯರ್. ವಾರ್ಮ್,ಕೂಲ್
ಭಾಷೆಗಳ ಅರ್ಥಮಾಡಿಕೊಳ್ಳಬೇಕಿದೆ
ಒಂಚೂರು ಚಿತ್ರವನ್ನು ಮಸುಕು ಮಾಡಿದರೆ,
ಮಂಜು ಮಂಜಾಗಿಸಿದರೆ, ಕಾಲ ಬದಲಿಸಿ
ಕಪ್ಪು ಬಿಳುಪಿಗೆ ಮರಳಿ ಸಿದರೆ
ಪೋಸ್ಟ್ ಮಾಡುವ ಮುನ್ನ ತಿಳಿಯಲೇಬೇಕಿದೆ
ವಸಂತ ಕಾಲವೀಗ ಶರತ್ಕಾಲ,
ಮಂಕು ಬಡಿದದ್ದಕ್ಕೆ ಚಿನ್ನದ ಲೇಪ!
ನಗರಕ್ಕೆ ಹಳ್ಳಿಯ ಮುಖವಾಡ
ಕನಸಿಗೆ ತಕ್ಕಂತೆ ಎಲ್ಲವನ್ನು ಬದಲಿಸುತ್ತ
ಮೂಲ ಚಿತ್ರವೇ ಅಳಿದು ಹೋಗಿದೆ
ಹಿಂದೆ ನಿಂತಿದ್ದವರೆಲ್ಲ ಮಾಯವಾಗಿದ್ದಾರೆ!
ಚಿತ್ರವನ್ನೇ ನೋಡಿ ನಂಬುವ ಕಾಲದಲ್ಲಿ
`ಅನ್ ಫಿಲ್ಟರ್ಡ್’ ಗಾಗಿ ವ್ಯರ್ಥ ಅರಸುವಿಕೆ!
ಹೊರಗೆ ಮಾತ್ರ ಗಿಡ, ಮರ, ಸೂರ್ಯ, ಚಂದ್ರ
`ಫಿಲ್ಟರ್’ನ ಗೋಜಿಲ್ಲದೆ ಹಾಯಾಗಿದ್ದಾರೆ!
-ಎಂ.ಆರ್. ಕಮಲ, ಬೆಂಗಳೂರು
—–