ಇದು ಅಮ್ಮನೆಂಬ ಅತ್ಯಮೂಲ್ಯ ಜೀವದ ಹೃದ್ಯಕವಿತೆ. ದೈವತ್ವವನ್ನೂ ಮೀರಿದ ಮಹಾನ್ ಚೈತನ್ಯದ ನಿತ್ಯ ಸತ್ಯ ಕಾರುಣ್ಯದ ಭಾವಗೀತೆ. ಪ್ರತಿ ಹೃದಯದ ಪೀಠದಲ್ಲಿರುವ ಅವಳಿಗೆ ಪೀಠಿಕೆ ಏಕೆ.? ಪದಗಳಿಗೆ ದಕ್ಕದ ಶಬ್ಧಾತೀತ ದಿವ್ಯ ಚೇತನ ಅವಳು. ಪ್ರತಿ ಜೀವ-ಜೀವನದ ಚಿರ ಚಿರಂತನ ದೈವ ಅವಳು. “ಅಮ್ಮ” ಎಂಬ ಎರಡಕ್ಷರದ ವಾತ್ಸಲ್ಯಸಿಂಧುವಿಗೆ ಈ ಆರಾಧನಾ ಗೀತೆಯನ್ನು ಅರ್ಪಿಸಿದ್ದಾರೆ ಕವಿ ಎ.ಎನ್.ರಮೇಶ್.ಗುಬ್ಬಿ ಅವರು!
ಜನನಿ..!
ಮಗುವಿಗೆ ಜನ್ಮ ನೀಡುವುದೆಂದರೆ..
ತಾಯಿಗೂ ಅಕ್ಷರಶಃ ಪುನರ್ಜನ್ಮ
ಮರಣವನ್ನೂ ಸೋಲಿಸಿ ಮಣಿಸಿದ
ಅಪೂರ್ವ ಅನಂತಾನಂತ ಸಂಭ್ರಮ
ಗೆದ್ದಂತೆ ಸಾವು ಬದುಕಿನ ಸಂಗ್ರಾಮ.!
ಮಗುವಿನ ಅಮ್ಮನಾಗುವುದೆಂದರೆ
ಪ್ರೀತಿಯ ದಾದಿಯಾಗುವುದು
ನೀತಿಯ ಗುರುವಾಗುವುದು
ಅನುದಿನ ಸೇವಕಳಾಗುವುದು
ಅನುಕ್ಷಣ ಪಾಲಕಳಾಗುವುದು.!
ಮಗುವಿನ ತಾಯಿಯಾಗುವುದೆಂದರೆ
ಮಗುವೊಡನೆ ಮಗುವಾಗುವುದು
ನಗುವೊಡನೆ ನಗುವಾಗುವುದು
ಅಳುವೊಡನೆ ಅಳುವಾಗುವುದು
ಅನವರತ ಅಕ್ಕರೆಯಾಗುವುದು.!
ಮಗುವಿನ ಮಾತೆಯಾಗುವುದೆಂದರೆ
ತೊದಲಿಗೆ ಮಾತಾಗುವುದು
ಹಸಿವಿಗೆ ಹಾಲಾಗುವುದು
ನಿದ್ರೆಗೆ ಲಾಲಿಯಾಗುವುದು
ತುತ್ತಿನ ಬಟ್ಟಲಾಗುವುದು.!
ಮಗುವಿನ ಅವ್ವನಾಗುವುದೆಂದರೆ
ನಲಿವಿಗೆ ನದಿಯಾಗುವುದು
ನೋವಿಗೆ ದನಿಯಾಗುವುದು
ನುಡಿಗಳಿಗೆ ಆಕರವಾಗುವುದು
ನಡಿಗೆಗೆ ಆಸರೆಯಾಗುವುದು.!
ತಾಯಿ, ಅಮ್ಮ, ಅವ್ವ, ಮಾತೆ
ಜನ್ಮದಾತೆಯಾಗುವುದೆಂದರೆ ಗೆಳೆಯ
ಹತ್ತು ಹಲವು ಅವತಾರಗಳ ನೆಲೆ
ನೂರಾರು ಭಾವಧಾರೆಯ ಜೀವಸೆಲೆ
ವ್ಯಾಖ್ಯೆಗೆಂದು ದಕ್ಕದ ಚೈತನ್ಯಶೃಂಖಲೆ.!
-ಎ.ಎನ್.ರಮೇಶ್.ಗುಬ್ಬಿ