ಅನುದಿನ ಕವನ-೧೩೯೧, ಕವಿ: ಎಂ.ಆರ್.ಸತೀಶ್, ಕೋಲಾರ, ಕವನದ ಶೀರ್ಷಿಕೆ:ಪ್ರೀತಿಗೆ ಸಾಕ್ಷಿಯಾಗು ಸುಮ್ಮನೆ…

ಪ್ರೀತಿಗೆ ಸಾಕ್ಷಿಯಾಗು ಸುಮ್ಮನೆ…

ಅಂದದ ಕನಸೊಂದು ಚೆಂದದಿ ಕಣ್ಣೊಳು ಕುಳಿತು
ಹಸಿವಿಗೆ ಹೊದಿಕೆ ಹೊದಿಸಿ ನಿದಿರೆ ದೂರ ಸರಸಿ
ಮನದಿ ಮುದ್ದಿಸಿದ ಒಲವು ಎದುರೆದುರಾದರೂ
ಅರಿಯದಾಯಿತೀ ಮನ ನಾ ಸೇರುವ ತೀರ ನೀನೆಂದು…

ಮುಂಜಾನೆ ಗುಡಿಸಿ ನೀರೆರೆಚಿ ಬಾಗಿಲಲಿಟ್ಟ ರಂಗೋಲಿ
ಇಟ್ಟ ಚುಕ್ಕಿಗಳಲೆಲ್ಲಾ ಇಣುಕಿಣುಕಿ ಕದ್ದು ನೋಡುವ
ಎಳೆದ ಗೆರೆಗೆರೆಗಳಲೂ ಬಣ್ಣವಾಗಿ ಇದ್ದು ನಲಿಯುವ
ಅರಿಯದಾಯಿತೀ ಮನ ನಾ ಬರೆದ ರಂಗೋಲಿ ನಿನದೆಂದು…

ಮನವ ಮರೆಸಿ ಮೆರೆಸಿ ಆವರಿಸಿದ ಪ್ರೀತಿಯುಸಿರಿತು
ಪ್ರೀತಿ ಕುರುಡಲ್ಲ ಭಾವ ಕಣ್ಣು ತೆರೆಯಬೇಕು ತಣ್ಣನೆ
ಕಾದ ಹೃದಯಕೆ  ಪ್ರೀತಿ ಸಿಂಚನ ಸಾಕ್ಷಿಯಾಗು ಸುಮ್ಮನೆ
ಅರಿತಾಯಿತೀಗ ಮನ ನೀ ಅಲ್ಲಿರಲಿಲ್ಲ ನಾ ಇಲ್ಲಿರಲಿಲ್ಲ
ನಮ್ಮೊಳಗಿದ್ದ ನಮ್ಮನು ನಾವು ಕಾಣಲಾಗಿರಲಿಲ್ಲ…             

-ಎಂ.ಆರ್.ಸತೀಶ್, ಕೋಲಾರ
—–