ಅವಳು ಮತ್ತು ಬದುಕು
ಹೈರಾಣು ಮಾಡುತ್ತಿವೆ
ಅದೆಷ್ಟೊಂದು ದೂಳುಗಳು
ಕಣ್ಣಿಗೆ ಕಾಣುವಂತವು,ಕಾಣದಂತವೂ
ಸ್ಪರ್ಶಕ್ಕೆ ಸಿಲುಕಿಯೂ,ಸಿಲುಕದಂತವು
ಬದುಕಿನ ಚಾದರ ಕೊಡವಲೇ
ಇಲ್ಲವಾದರೂ
ಸಂದಿಗೊಂದಿಗಳಿಂದೆದ್ದ
ಅಸಂಖ್ಯ ಧೂಳುಗಳು,
ದೂಳಿನ ಕಣಗಳು
ದಮ್ಮುಗಟ್ಟಿಸುತ್ತಿವೆ
ಕಷ್ಟ ಕಷ್ಟ ಉಸಿರು
ಹತ್ತಿಕ್ಕುತ್ತಿವೆ.
ಯಾರು ಕೊಡವಿದರೊ,
ಏನು ಕೊಡವಿದರೊ,
ಯಾಕೆ ಹಾಗು ಯಾವಾಗ
ಕೊಡವಿದರೊ
ಗಪ್ಪನೆ ರಾಚಿ ರಾಚಿ ಜೀವದ
ನಾಸಿಕಗಳನ್ನೆಲ್ಲವನ್ನೂ
ಒಮ್ಮೆಲೆ ಆವರಿಸಿ
ಮಾಡದ ತಪ್ಪಿಗೆ
ಅರಿಯದ ತಪ್ಪಿಗೆ
ಕಾಣದ ತಪ್ಪಿಗೆ
ನೋಡದ ತಪ್ಪಿಗೆ
ಯಾವ ಅಪರಾಧಕ್ಕೆ
ಯಾರಯಾರದೊ ಕರ್ಮಕ್ಕೆ
ಹೀಗೆ
ದಿನವೂ
ದೂಳಿನ ಕಣಕಣವೂ
ಹಬ್ಬುತ್ತಾ ಹರಡುತ್ತಾ
ಸೆಳೆಯುತ್ತಾ ಸವೆಸುತ್ತಾ
ರಾಶಿ
ರಾಶಿ
ರಾಶಿ
ಕ್ಷೀಣಿಸುತ್ತಿದೆ ಚೈತನ್ಯ
ಅಡಗಿಸುತ್ತಿದೆ ಭಾವಚಿಲುಮೆ
ಯಾವ ದಿಕ್ಕಿನಿಂದ ಉಕ್ಕುತ್ತಿದೆ
ದೂಳಿನೊರತೆ ,
ಯಾವ ಕುಲುಮೆಯಿಂದ
ಜ್ವಲಿಸುತ್ತಿದೆ ದೂಳಿನ ಚಿತೆ
ಅರಿಯುವಷ್ಟರಲ್ಲಿ,
ದೂಳಿನ ಮರ್ಮ ತಿಳಿಯುವಷ್ಟರಲ್ಲಿ
ಸುತ್ತಲೂ ಮುತ್ತಿ, ಹಲವು ಕಡೆ
ಒತ್ತಿ ಒತ್ತಿ ಒತ್ತರಿಸುತ್ತಿದೆ.
ಕಣ್ಣು , ಕಿವಿ, ಮೂಗು, ನಾಲಿಗೆಯ ಪದರ, ಪಂಚೇಂದ್ರಿಯಗಳ ಉದರ
ಕಂಗಾಲಾಗಿವೆ
ಬಲವಂತದ ಉಚ್ಛಾಸ
ನಿಶ್ವಾಸಕ್ಕೂ ಧಕ್ಕೆಯಾಗಿದೆ.
ಸಾಕಾಗಿದೆ ದೂಳಿನ ಆಕ್ರಮಣದ
ಪರಿ ಜೀವಕ್ಕೆ ಎರವಾಗಿದೆ,
ತಲ್ಲಣಿಸಿದೆ ಶಾಂತಿ ಸಮಾಧಾನದ ಮುಗಿಲು
ನಾಪತ್ತೆಯಾಗಿದೆ ಕನಸುಗಳು ಕಂದೀಲು
ಕಿವುಡು, ಕುರುಡು,ಮೂಕತನದ ನಿರ್ಲಿಪ್ತ ದೂಳಿಗೆ ,
ಅದರ ವ್ಯಾಪ್ತಿಗೆ , ವಿಸ್ತಾರಕ್ಕೆ
ಆಳ ಅಗಲದ ಪರಿಗೆ ಬೆರಗಾಗಿದೆ
ದೂಳಿನ ರಾಣಿಗೊ ದೊರೆಗೊ
ದೂರು ಕೊಡಬೇಕೆಂದರೂ ಮನಸು ಮಂಕಾಗಿದೆ
ಸೊಗಡು ಭ್ರಮೆಯಾಗಿದೆ
ದೂಳು ಕೊಡುವುವವರು
ಬೇಕಾಗಿದ್ದಾರೆ ಎಂಬುದಾಗಿ ಜಾಹೀರಾತು ಕೊಡೋಣವೆಂದರೆ
ದೂಳಲ್ಲೇ ಮುಳುಗಿರುವ
ಆತ್ಮದ ಹಾದಿಯ ತುಂಬಾ
ದೂಳಿನದೇ ಸಾಮ್ರಾಜ್ಯ
ಸಾರ, ಪರಿಹಾರ ಮಸುಕಾಗಿದೆ
ಸುಖಾಸುಮ್ಮನೆ ಅಲೆಸುತ್ತಿದೆ
-ಮಮತಾ ಅರಸೀಕೆರೆ,, ಹಾಸನ ಜಿ.
—–