ಅನುದಿನ ಕವನ-೧೩೯೪, ಕವಿ:ವೀಮ(ವೀರಣ್ಣ ಮಡಿವಾಳರ), ನಿಡಗುಂದಿ, ಬೆಳಗಾವಿ ಜಿ. ಕವನದ ಶೀರ್ಷಿಕೆ:ನಾನು ಮತ್ತೆ ನಿನ್ನ ಭೇಟಿಯಾಗದಿರಬಹುದು….

ನಾನು ಮತ್ತೆ ನಿನ್ನ ಭೇಟಿಯಾಗದಿರಬಹುದು….

ಸಗ್ಗದ ಸುಂದರಿ ನಿನ್ನರಮನೆಯ ಕಾವಲುಗಾರ ನಾನು
ನಿನ್ನ ಬಯಸುವ ಮಹಾಪರಾಧ ಮಾಡಲಾರೆ
ಬದಗನಿಗಿರುವ ಭಾಗ್ಯ ಎಲ್ಲರಿಗೂ ಹೇಗಿರಲು ಸಾಧ್ಯ
ಅವನ ಬಳಿಯಾದರೋ ಮಾಂತ್ರಿಕ ಕೊಳಲಿತ್ತು
ನನ್ನ ಬಳಿ ಏನಿವೆ ಬರೀ ಕಂಬನಿ ಸುರಿಸುವ ಅಕ್ಷರ

ಒಂದು ಕ್ಷಣ ನೀನು ನವಿಲನೇರಿ ಎಲ್ಲ ಲೋಕ ಸುತ್ತಿ ಬರುತ್ತಿ
ನಗುವಿನ ಹಣ್ಣುಗಳ ತಿಂದು ತಿಳಿಜಲ ಕುಡಿದು ಸಕಲ ಲೋಕದ ಸಂಭ್ರಮದಲ್ಲಿ ಭಾಗಿಯಾಗಿ ಆಕಾಶದಲ್ಲೂ ದಸರಾ ಆಚರಿಸುತ್ತಿ
ನಾನು ಕಡುಗತ್ತಲ ಸ್ನೇಹಿತ ಮುಳ್ಳಿನ ಹಾದಿಯ ಪಯಣಿಗ
ನೋವಿನ ಬೇವು ತಿಂದು ನನ್ನ ಕಣ್ಣೀರು ನಾನೇ ಕುಡಿದು
ಬದುಕುತ್ತಾ ಸಾಗಿದ್ದೇನೆ
ಯಾರ ಸಾಂಗತ್ಯ ಯಾರಿಗೆ ಬೇಕು ಸಂಕಟದ ಸಂಭ್ರಮವೇ ನನಗೆ ಸಾಕು

ಜೋಡಿಸಿಟ್ಟ ಬೆಳ್ಳಿ ಮೋಡದಂಥ ದಂತಪಂಕ್ತಿಯ ಹಿಂದೆ ನಿನ್ನ ಹಜಾರು ನೋವುಗಳು ಕೇಕೆ ಹಾಕಿದರೂ ನೀನು ಜಗತ್ತಿಗೆ ನಗುವನ್ನೇ ತೋರಿಸುತ್ತೀ
ನಗುವಿನ ಮಿಣುಕು ಹುಳಗಳ ಮಿನುಗಿಸಿ ಊರಿಗೆಲ್ಲ ಬೆಳಕು ಚಲ್ಲುತ್ತಿ
ನೀನು ನಡೆದಾಡಿದಲ್ಲೆಲ್ಲ ಪರಿಮಳದ ಸದ್ದು
ಮುಂಗುರುಳ ಹೆರಳಲ್ಲಿ ಲೋಕದೆಲ್ಲರ ಮೋಡಿ ಮಾಡುತ್ತಿ
ನಾನು ನಿನ್ನ ಪ್ರೀತಿಸುತ್ತೇನೆ ಎಂದರೆ ಮಾತ್ರ ಖಬರ್ದಾರ್ ಎನ್ನುತ್ತೀ

ಆ ಪರ್ವರ್ದಿಗಾರನ ಮೇಲಾಣೆ
ನಿನ್ನ ಅನುಕ್ಷಣ ಅನುದಿನ ಪ್ರೀತಿಸುವೆ
ಮನಬಂದಂತೆ ನೆನೆಯುವೆ
ನಿನ್ನ ರುಜುವಾತು ಯಾರಿಗೆ ಬೇಕು

ನಾನು ಹುಟ್ಟಿದ ಮೇಲೆ ನೀನೂ ಹುಟ್ಟಿದೆ ನೀನು ಹುಟ್ಟಿದ ಮೇಲೆ ಪ್ರೀತಿಯೂ ಹುಟ್ಟಿತು
ಹೃದಯ ಒಡೆದ ಸದ್ದು ಯಾರಿಗೆ ಕೇಳಿಸಬೇಕು
ಒಡೆದ ಹೃದಯ ಹೊತ್ತೇ ಜೀವನ ಪೂರ್ತಿ ತಿರುಗಬೇಕು
ಈ ಕೀರುತಿ ಮಾತ್ರ ನಿನ್ನದೇ ಕರಾಮತ್ತು

ಜಗದ ಹಕೀಕತ್ತು ನನಗೆ ಬೇಡ
ನಿನ್ನ ಜರೂರತ್ತೂ ನಿನಗೇ ಇರಲಿ

ಒಂದು ದಿನ ಚಂದಿರ ಹಗಲು ಬೆಳಗುವ ಹೊತ್ತು
ನಿನಗೆ ನನ್ನ ನೆನಪಾದರೆ ಖಂಡಿತ ಬಾ
ಪ್ರೀತಿಸುವ ಮೊದಲ ದಿನವೇ ಸಜ್ಜೆ ಮನೆಗೆ ಹೋಗೋಣ
ಯಾರ ಹಿಕ್ಮತ್ತು ನಮಗೇನು ಮಾಡೀತು
ನನ್ನ ನಿನ್ನ ನಿಯತ್ತು ಈ ಲೋಕವ ಎಲ್ಲ ಪಾಪದಿಂದ ಕಾಪಾಡಲಿ

ಮತ್ತೆ ನಾನು ನಿನ್ನ ಭೇಟಿಯಾಗದಿರಬಹುದು… ನೆನಪಿಟ್ಟುಕೊ

– ವೀಮ
—–