ಅವಳ ಕೈಗಳೆಂದೂ ಸೋಲುವುದೇ ಇಲ್ಲ
ಅವಳ ಕೈಗಳೆಂದೂ ಸೋಲುವುದೇ ಇಲ್ಲ
ಉಸಿರಿರುವರೆಗೆ ಮಾಡಲು ಮನೆಗೆಲಸ
ಅಡಿಗೆಯ ಮಾಡಿ ಊಟಕೆ ಬಡಿಸುವ
ಕೈಗಳೆಂದೂ ಸೋಲುವುದೇ ಇಲ್ಲ
ಪ್ರತಿ ತಿಂಗಳು ಮುಟ್ಟಾದೊಡೆ
ಮೂರು ದಿನ ಹೊರಗೆ ಕೂರಲಾದೀತೆ?
ಅಡಿಗೆ ಮನೆಗೆ ಮೂರು ದಿನ
ರಜೆ ಘೋಷಿಸಲಾದೀತೇ?
ಅದ್ಯಾವ ಪುರುಷ ವಹಿಸಿಕೊಳ್ಳುವನೋ
ಅಡಿಗೆ ಮನೆಯ ಉಸ್ತುವಾರಿ
ಅವಳ ಮಕ್ಕಳ ಮೇಲಿನ
ಪ್ರೀತಿಯೆಂದೂ ಬತ್ತುವುದೇ ಇಲ್ಲ
ತೊಟ್ಟಿಲಂತೆ ತೂಗಿ ಮಲಗಿಸುವ
ಮಡಿಲಿಗೆಂದಾದರೂ ಸುಸ್ತಾಗಿದ್ದು ಇದೆಯೇ?
ಮಗುವಾಗಿದ್ದಾಗವಳ ಮಡಿಲ ಸುಖ
ಅನುಭವಿಸಿದವರಾರಿದ್ದಾರೆ ಈ ಜಗದಲಿ
ಮಡಿಲಲ್ಲಿ ಮಲಗಿಸಿಕೊಂಡ ಮಳೆನೀರ
ನಿಧಾನವಾಗಿ ತನ್ನ ಒಡಲಲ್ಲಿಳಿಸಿಕೊಳ್ಳಲು
ಮುನಿಸಿಕೊಂಡಿದಿಯೇ ಈ ಭೂಮಿ
ನೋವಿನ ನೇರಿಗೆಯಲ್ಲಿ ಕನಸುಗಳ ಬಚ್ಚಿಟ್ಟ
ಅವಳ ತೋಳುಗಳಿಗೆಂದೂ
ಒರಗಿಸಿಕೊಳ್ಳಲು ಬತ್ತಿ ಬಸವಳಿದ
ದಾಖಲೆ ಇದೆಯೇ?
ಅವಳ ಕೈಗಳೆಂದು ಸೋಲುವುದೇ ಇಲ್ಲ
ಪ್ರೀತಿ ತೊಟ್ಟಿಕ್ಕುವ ಅವಳ ತೋಳಿನಾಸರೆ
ಬಯಸಿ ಬಂದ ಮಗುವಿಗೆ ಕೈಹಿಡಿದಾತನಿಗೆ
ಒಲ್ಲೆನೆನವು ಮಾತೇ ಇಲ್ಲ
ಭೂಮಿಯ ಒಡಲೆಂದೂ ಬರಿದಾಗುವುದಿಲ್ಲ
ಭೂಮಿಯ ಒಡಲ ತುಂಬಿಸಲು
ಆಕಾಶದ ಮಡಿಲಲ್ಲಿ ಮಲಗಿದ ಮೋಡ
ಕಣ್ಣೀರು ಸುರಿಸುತ್ತಿದೆ
ಶತಶತಮಾನದಿಂದ ಹೊರೆಸಿದ ನೊಗ
ಕೆಳಗಿಳಿಸದ ಅವಳ ಹೆಗಲೆಂದೂ
ಸೋಲುವುದಿಲ್ಲ
ಕಾಲದ ಸಂದೂಕಿನಲ್ಲಿಟ್ಟು
ಬೀಗ ಜಡಿದ ಅವಳ ಗುರುತು ಪತ್ರ
ಬೀಗ ಒಡೆದು ಹೊರತೆಗೆಯಬೇಕಿದೆ
ಈಗವಳು ಹಕ್ಕಿನ ಅನಿರ್ಧಿಸ್ಟ ಕಾಲದ
ಹೋರಾಟದ ಮೆರವಣಿಗೆಯಲ್ಲಿ
ಕಾಲು ಸೋಲದವಳು
ಅವಳ ಕೈಗಳು ಕಾಲುಗಳು
ಎಂದೂ ಸೋಲುವುದೇ ಇಲ್ಲ.
– ಪ್ರಕಾಶ ಕೋನಾಪುರ
ಶಿವಮೊಗ್ಗ