ಹುಡುಕಾಟದ ಹೆಜ್ಜೆ
ಸಾಗುತಿದೆ ಸತ್ಕಾರದ ಹಾರ
ಸಾವಧಾನದ ಹೆಜ್ಜೆ ಗುರುತನ್ನು
ಆದರೂ ಸಿಗುತ್ತಿಲ್ಲ
ಸಹಾಯದ ಕಲ್ಲು…
ಪ್ರತಿ ಹಾದಿಯ ಸರಕಿನೊಳು
ಸಿಗುತಿದೆ ವ್ಯಂಗ್ಯದ ತುಪಾಕಿ
ಬಿಡದೆ ಹುಡುಕಿದೆ
ಲೇಖನಿಯ ಶಹೀದು….
ಋಣದ ತಡವಡಿಕೆ
ಎದೆಯನು ಚುಚ್ಚಿ
ಚಡಪಡಿಸುತಿದೆ..
ಕಾಡಿನ ಕನವರಿಕೆಯಲಿ
ಕಾವ್ಯದ ಕಣ್ಣು ಋಣದ ಎಲೆಯನು ಎಳೆ ಎಳೆಯಾಗಿ ಹುಡುಕುತಿದೆ….
ಬ್ಯಾಸರದ ಪ್ರಸರದಲಿ
ಒಂದೊಂದಾಗಿ ಬರುತಿವೆ
ಉಪಕಥೆಯ ವ್ಯಥೆ,,
ಆದರೂ ಹುದುಗಿ ಹೊರಡುತಿದೆ ವ್ಯಸನದ ಬುತ್ತಿ….
ಹಳಿಯ ನಡಿಗೆಯೊಳು ಸಹಾಯ ಪ್ರಶ್ನಿಸುತಿದೆ
ಗಂಭೀರದ ವ್ಯಕ್ತಿತ್ವವ,,
ಬಾಯಿಬಿಡದೆ ಕೊರಗುತಿದೆ
ಋಣದ ಬೇಲಿಹೊರೆ….
ಎಷ್ಟು ಸೋಜಿಗ ವಲ್ಲವೆ
ಜಗದ ನಿಯಮ?
ಜೀವನದ ಹುಡುಕಾಟದೊಳು
ಪರಿಪಾಠ ಅಂತ್ಯವಿಲ್ಲದೇ ಸಾಗುತಿದೆ….
ಮಾತಿನ ಸಾಮ್ಯತೆ ಇರುವ ಎಲ್ಲೋ ಮರದ ನೆರಳ ಕೆಳಗೆ
ಕೂತು ಗುಟುಕು ಹನಿಯ
ಬಿಂದು ಕೂಡ ಯೋಚನೆಗೈದಿದೆ…..
ಮುಳ್ಳು ಕೊಂಬೆಗಳು
ಸೂಜಿಗದ ಹೆಜ್ಜೆಗೆ ಗಾಯವ ಮಾಡುತಿವೆ.
ಹುಡುಕುವ ಸಮಯ ಮಾತ್ರ ರಾತ್ರಿ ಹಗಲೆನ್ನದೆ ಸೋಲುತ್ತಿಲ್ಲ….
ಕೊನೆಯಿಲ್ಲದ ವಿರಾಮಕೆ
ಆತ್ಮ ಚರಿತೆ ಓಗೊಟ್ಟು ಕರೆಯುತಿದೆ…
ಶೋಧನೆಯ ಹಾದಿಗೆ
ದೀವಟಿಗೆಯ ಬೆಳಕು ತೃಣ
ಎನಿಸುತಿದೆ….
ಆದರೂ ಹುಡುಕುತಿದೆ
ಸಾವಧಾನದ ಹೆಜ್ಜೆ…..
-ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ