ಆಗಿನ್ನೂ ಹಚ್ಚಿದ ಹಣತೆ
ಬಯಲ ಅಂಚಿನಲ್ಲಿ
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು
ನಿಂತಿದ್ದ ಅವಳು
ಗ್ರಾಮ ದೇವಿಯಂತೆ ಕಂಡಳು
ಊರ ಜನರ ಕಣ್ಣಿಗೆ
ಘಾಸಿಯಾಗಿ ಚುರುಗುಡುತ್ತಿತ್ತು
ಅವಳ ಬೆನ್ನ ಮೇಲಿನ ಗಾಯ
ಬೀಸುವ ಗಾಳಿಗೆ ತಗುಲಿ
ಅವಳ ಅಸ್ಪೃಶ್ಯ ಬೆರಳುಗಳು
ಬೆವರಿ ನಡುಗುತ್ತಿದ್ದವು
ಹಸಿದ ಕಂದನ ದಾಹವ ಆರಿಸಲು
ಎದೆಯ ಮೇಲಿನ ಸೆರಗ ಸರಿಸಿ
ಕಾಲಿನ ತುದಿಗೆ ಚುಚ್ಚಿದ್ದ ಅಂಗೈ
ಅಗಲದ ಮೊನೆಯ ತೀವ್ರತೆ
ಛಡಿ ಏಟನು ಅನುರಣಿಸುವಾಗ
ಮತ್ತದೇ ಗುರುತಿನ ಘೋಷಣೆ
ಖೈರ್ಲಾಂಜಿಯಲ್ಲಿ ಸುಟ್ಟು ಕರಕಲಾದ
ಶವಗಳ ಬೂದಿಯ ಕಿಡಿಗಳ
ಹೋಲುವಂತಿದ್ದವು
ಹಾರ ತುರಾಯಿಗಳ ತೊಟ್ಟ
ದೊಡ್ಡವರ ನಡುವೆ ಇಣುಕುವ
ಪುಟ್ಟ ಕೈಗಳಲಿ ಉರಿವ ಹಣತೆಗಳು
-ಸಂಘಮಿತ್ರೆ ನಾಗರಘಟ್ಟ
—–