ಕುವೆಂಪು ವಿವಿಯಲ್ಲಿ ರಾಷ್ಟ್ರೀಯ ಏಕತಾ ದಿವಸ ಆಚರಣೆ: ರಾಷ್ಟ್ರದ ಸಮಗ್ರತೆ, ಐಕ್ಯತೆಗಾಗಿ ಹೋರಾಡಿದ ಧೀಮಂತ ಸರ್ದಾರ್ ವಲ್ಲಭಭಾಯ್ ಪಟೇಲ್ -ಕುಲಪತಿ ಪ್ರೊ.ಶರತ್ ಅನಂತ್ ಮೂರ್ತಿ

ಶಂಕರ ಘಟ್ಟ (ಶಿವಮೊಗ್ಗ), ಅ.31: ಸ್ವತಂತ್ರ ಭಾರತದ ಪ್ರಪ್ರಥಮ ಉಪ ಪ್ರಧಾನಮಂತ್ರಿ, ಗೃಹ ಸಚಿವ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ರಾಷ್ಟ್ರದ ಸಮಗ್ರತೆಗಾಗಿ, ಐಕ್ಯತೆಗಾಗಿ ಮತ್ತು ಭದ್ರತೆಗಾಗಿ ಹೋರಾಡಿದ ಧೀಮಂತ ವ್ಯಕ್ತಿ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರತ್ ಅನಂತ್ ಮೂರ್ತಿ ಅವರು ಕೊಂಡಾಡಿದರು.                                  ಅವರು ವಿವಿಯ ಆಡಳಿತ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಏಕತಾ ದಿವಸದ ಆಚರಣೆ ಕಾರ್ಯಕ್ರಮದಲ್ಲಿ ಪ್ರತಿಜ್ಞೆಯನ್ನು ಬೋಧಿಸಿ ಮಾತಾಡಿದರು. ಪಟೇಲ್ ಅವರು ಭಾರತವನ್ನು ಗಣರಾಜ್ಯವಾಗಿಸಿದವರು. ರಾಜಪ್ರಭುತ್ವದಿಂದ ಬಿಡುಗಡೆ ಮಾಡಿ, ಪ್ರಜಾಪ್ರಭುತ್ವವನ್ನು ಜಾರಿಗೊಳಿಸಲು ಶ್ರಮಿಸಿದ ಮಹನೀಯರು ಎಂದು ಹೇಳಿದರು.                                                       ಮಹನೀಯರ ಜನ್ಮದಿನವನ್ನು  ರಾಷ್ಟ್ರೀಯ ಏಕತಾ ದಿವಸ ಎಂದು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಅದಕ್ಕಾನುಸಾರ ನಾವೆಲ್ಲರು ರಾಷ್ಟ್ರದ ಭದ್ರತೆಯನ್ನು ಕಾಪಾಡೋಣ ಎಂದರು.                                ಪರೀಕ್ಷಾಂಗ ಕುಲಸಚಿ ಪ್ರೊ.ಎಸ್.ಎಂ.ಗೋಪಿನಾಥ್ ಅವರು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪಮಾಲೆಯನ್ನು ಸಮರ್ಪಿಸಿ, ನಮ್ಮ ದೇಶ ಕಂಡ ಅಪರೂಪದ ದಕ್ಷ ಆಡಳಿತಗಾರರು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು. ಆದರ್ಶ ವ್ಯಕ್ತಿತ್ವದ ಶಕ್ತಿವಂತರಾಗಿದ್ದರು. ದೇಶದ ಹಿತಕ್ಕಾಗಿ ಹಗಲಿರುಳು  ದುಡಿದವರು. ಅವರಂತೆ ರಾಷ್ಟ್ರೀಯ ಐಕ್ಯತೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸೋಣ ಎಂದರು. ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ  ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಡಾ.ಯಾದವ್ ಬೊಡ್ಕೆ, ಜಯಕುಮಾರ್, ವಿಜಯ್, ನಾಗೇಶ್, ರಮೇಶ್ ಮೊದಲಾದವರು ಭಾಗವಹಿಸಿದ್ದರು.