ಬಳ್ಳಾರಿ, ಅ.31: ಅಲೆಮಾರಿ ಹಗಲುವೇಷ ಹಿರಿಯ ಕಲಾವಿದ ಹಳೇ ದರೋಜಿ ಅಶ್ವ ರಾಮಣ್ಣ ಅವರಿಗೆ 2024ನೇ ಸಾಲಿನ ಪ್ರಶಸ್ತಿ ಲಭಿಸಿದೆ.
ಆರೇಳು ವರ್ಷದಲ್ಲೇ ಬಣ್ಣ ಹಚ್ಚಲು ಆರಂಭಿಸಿದ ರಾಮಣ್ಣ ತಮ್ಮ ಅರವತ್ತೆಂಟನೇ ಹರೆಯದಲ್ಲೂ ಹಗಲುವೇಷ ಹಾಕುವಾಗ ಮಗುವಾಗುತ್ತಾರೆ.
ತಮ್ಮ ತಂದೆ ತಾತಾ ಅವರಿಂದ ಬಂದ ಬಹುರೂಪಿ ಕಲೆಯನ್ನು ಮುಂದುವರೆಸಿದ್ದಾರೆ. ತಮ್ಮ ಮಕ್ಕಳಿಗೂ ಜಾನಪದ ಕಲೆಯ ಮಹತ್ವವನ್ನು ಅರುಹಿದ್ದಾರೆ. ಹೀಗಾಗಿ ಇವರ ಕುಟುಂಬವೇ ಹಗಲುವೇಷ ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ ಮಾತ್ರವಲ್ಲ ಈ ಕಲೆಯನ್ನೇ ನಂಬಿದೆ.
ಭೀಮಾಂಜನೇಯ ಯುದ್ಧ, ಶೂರ್ಪನಖಿಯ ಗರ್ವ ಭಂಗ, ಮೋಹಿನಿ ಭಸ್ಮಾಸುರ, ಜಟಾಸುರನ ವಧೆ, ಸುಂಧ ಉಪಸುಂಧ, ಸಿಂಧೂರ ಲಕ್ಷ್ಮಣ ಸೇರಿದಂತೆ ಹಲವು ಪೌರಾಣಿಕ, ಸಾಮಾಜಿಕ ಹಗಲು ವೇಷಗಳನ್ನು ಹಾಕುತ್ತಾ ಜನ ಮನ ರಂಜಿಸುತ್ತಿದ್ದಾರೆ.
ಇವರ ನೇತೃತ್ವದ ಕಲಾತಂಡಗಳು ಹಂಪಿ ಉತ್ಸವ, ಮೈಸೂರು ದಸರಾ, ಬಳ್ಳಾರಿ ಉತ್ಸವ, ರಾಜ್ಯ, ಅಖಿಲ ಭಾರತ ಉತ್ಸವಗಳಲ್ಲಿ ಭಾಗವಹಿಸಿ ಗಮನ ಸೆಳೆದಿವೆ.
ಪ್ರಶಸ್ತಿ: 2008ನೇ ಸಾಲಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪ್ರಶಸ್ತಿ, ಪುರಸ್ಕಾರ ಗಳಿಗೆ ಪಾತ್ರರಾಗಿದ್ದಾರೆ.
ಗುರುವಾರ ಸಂಜೆ ಪ್ರಶಸ್ತಿ ಸ್ವೀಕರಿಸಲು ತಮ್ಮ ಕುಟುಂಬ ಸದಸ್ಯರ ಜತೆ ಬೆಂಗಳೂರಿಗೆ ಹೊರಡುವ ಗಡಿಬಿಡಿಯಲ್ಲಿದ್ದ ರಾಮಣ್ಣ ಅವರು, ಕರ್ನಾಟಕ ಕಹಳೆ ಜತೆ ಸಂತಸ ಹಂಚಿಕೊಂಡರು. ಈ ಪ್ರಶಸ್ತಿ ಎಲ್ಲಾ ಅಲೆಮಾರಿ ಕಲಾವಿದರು ಮತ್ತು ಸೋದರತ್ತೆ ನಾಡೋಜ ಬುರ್ರಕಥಾ ದರೋಜಿ ಈರಮ್ಮ ಅವರಿಗೆ ಅರ್ಪಿಸಲು ಹರ್ಷಿಸುತ್ತೇನೆ ಎಂದರು.
ನನ್ ತಾತಾ, ತಂದೆ ದಿ. ನಾಗಭೂಷಣಪ್ಪ ಹಾಗೂ ಬುರ್ರಕಥಾ ಗಾಯಕಿ ಅಮ್ಮ ಅಶ್ವ ಪಾರ್ವತಮ್ಮ ಅವರಿಂದ ಕಲಿತ ವಿದ್ಯೆ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ದೊರೆಯುವಂತೆ ಮಾಡಿದೆ ಎಂದು ವಿನೀತರಾಗಿ ನುಡಿದರು.
ಈಗಲೂ ಅಲೆಮಾರಿ, ಬುಡ್ಗ ಜಂಗಮ ಕಲಾವಿದರು ಟೆಂಟ್ ಗಳಲ್ಲಿ ವಾಸಿಸುತ್ತಾ, ಹೊಟ್ಟೆಪಾಡಿಗಾಗಿ ಊರೂರು ಅಲೆಯುತ್ತಿದ್ದಾರೆ. ಇವರಿಗೆ ಸರಕಾರ ನೆರವು ನೀಡಬೇಕು ಎಂದು ಹೇಳುವುದನ್ನು ಅಶ್ವ ರಾಮಣ್ಣ ಮರೆಯಲಿಲ್ಲ.
ಅಭಿನಂದನೆ: ಅಶ್ವ ರಾಮಣ್ಣ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ ಹಿನ್ನಲೆಯಲ್ಲಿ
ಕನ್ನಡ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆಎಂ ಮೇತ್ರಿ, ಹಿರಿಯ ಪ್ರಾಧ್ಯಾಪಕ ಡಾ. ಚೆಲುವರಾಜು, ಧಾರವಾಡ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ ನಿಂಗಪ್ಪ ಮುದೇನೂರು, ಬಳ್ಳಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪನಿರ್ದೇಶಕ ಚೋರನೂರು ಕೊಟ್ರಪ್ಪ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಸಿ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಡಾ ಅಶ್ವ ರಾಮು, ಸಂಘಟನಾ ಕಾರ್ಯದರ್ಶಿ ಹೇಮಾ ಹೊಸೂರು ಮಠ, ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಪದ್ಮಶ್ರೀ ಮಂಜಮ್ಮ ಜೋಗತಿ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ ವಿ ನಾಗರಾಜ್ ಮೂರ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ ಪುರುಷೋತ್ತಮ ಬಿಳಿಮಲೆ, ಲೇಖಕಿ ಡಾ. ವಸುಂದರಾ ಭೂಪತಿ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ , ಸದಸ್ಯ ಮೆಹಬೂಬ್ ಕಿಲ್ಲೆದಾರ್ , ಬಂಜಾರ ಅಕಾಡೆಮಿ ಅಧ್ಯಕ್ಷ ಡಾ ಗೋವಿಂದ ಸ್ವಾಮಿ, ಹಿರಿಯ ಬಯಲಾಟ ಕಲಾವಿದ ಬಂಡ್ರಿ ಲಿಂಗಪ್ಪ, ಬೆಂಗಳೂರು ವಿವಿ ಅಧ್ಯಾಪಕಿ ಡಾ. ಪ್ರಿಯಾಂಕಾ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ನಿಷ್ಟಿ ರುದ್ರಪ್ಪ, ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳ್, ಬುಡ್ಗ ಜಂಗಮ ಸಮುದಾಯದ ರಾಜ್ಯ ಅಧ್ಯಕ್ಷ ಸಣ್ಣ ಮಾರೆಪ್ಪ ,ಕಂಪ್ಲಿ ಹಾಗೂ ಬಳ್ಳಾರಿ ಜಿಲ್ಲೆಯ ಪತ್ರಿಕಾ ಮಾಧ್ಯಮದ ಸಹೋದರರು, ಬಳ್ಳಾರಿ ಜಿಲ್ಲೆಯ ಕಲಾವಿದರು, ಅಲೆಮಾರಿ ಬುಡಕಟ್ಟು ಸಮುದಾಯಗಳ ಮುಖಂಡರು, ಕಲಾವಿದರು ಅಭಿನಂದಿಸಿದ್ದಾರೆ.