ಮತ್ತೆ ಹುಟ್ಟುವುದಾದರೆ….
ಮತ್ತೆ ಹುಟ್ಟುವುದಾದರೆ
ಈ ನೆಲವೇ ಇರಲಿ
ಹುಟ್ಟಿದ ಮೇಲೆನ್ನ ನುಡಿಯು
ಕನ್ನಡವೇ ಆಗಿರಲಿ.
ತುಂಗೆಯಲಿ ನಾನಿರಲು
ಗಂಗೆಯೂ ಬರಲಿ
ಕೃಷ್ಣೆ-ಗೋದಾವರಿ
ಗೆಳತಿಯರು ಸಿಗಲಿ.
ಹಿಮಾಲಯವು ಮುಡಿಯಲ್ಲಿ
ಸಹ್ಯಾದ್ರಿಯು ಅಡಿಯಲ್ಲಿ
ಅಲ್ಲಲ್ಲಿಯೇ ಇರಲಿ.
ಕಲ್ಕತ್ತೆಯ ಕಾಳಿ
ಶೃಂಗೇರಿ ಶಾರದೆಗೆ
ಹೂವು-ಕುಂಕುಮ ಕೊಡಲಿ.
ದೂರದಲ್ಲೇಕೆ ಇರಬೇಕು ದೆಹಲಿ
ಶಿವಮೊಗ್ಗೆಗೇ ಬರಲಿ.
ಮತ್ತೆ ಹುಟ್ಟುವುದಾದರೆ
ಈ ನೆಲವೇ ಇರಲಿ.
ಮಂಗಳೂರಿನ ಕಡಲು
ಮಡಿಕೇರಿಯ ಮಂಜಿನೊಡಲು
ನನಗೊದಗಿ ಬರಲಿ.
ಹಟ್ಟಿ ಚಿನ್ನದ ಬುಗುಡಿ
ಕಾರವಾರದ ಸೀಗಡಿ
ತುಟ್ಟಿಯಾಗದೇ ಇರಲಿ.
ಸೊರಗದಿರಲಿ ಬೇಲೂರಿನ ಬಾಲೆ…
ಒಣಗದಿರಲಿ ಜೋಗದ ಮೋರೆ…
ಇಳಕಲ್ಲಿನ ಸೀರೆಗೆ
ಕಾಶ್ಮೀರದಲ್ಲೂ ಬೆಲೆ ಸಿಗಲಿ.
ಮತ್ತೆ ಹುಟ್ಟುವುದಾದರೆ
ಈ ನೆಲವೇ ಇರಲಿ.
ಮೇಲುಕೋಟೆಯ ಚೆಲುವ
ನನಗೊಲಿದು ಬರಲಿ.
-ಸವಿತಾ ನಾಗಭೂಷಣ, ಶಿವಮೊಗ್ಗ
—-