ಅನುದಿನ ಕವನ-೧೪೦೩, ಕವಯಿತ್ರಿ: ಉಷಾ ಗೊಬ್ಬೂರ, ಕಲಬುರಗಿ, ಕವನದ ಶೀರ್ಷಿಕೆ: ತಾಯ್ನುಡಿ

ತಾಯ್ನುಡಿ

ಹಚ್ಚ ಬನ್ನಿ ಕನ್ನಡದ ಹಣತೆಯ
ಎಲ್ಲ ಮನೆ ಮನಗಳಲ್ಲಿ
ಉಸಿರನೀವ, ಬದುಕನೀವ
ಸಂಜೀವಿನಿ ಈ ನುಡಿಯು

ಬರಿ ಭಾಷೆಯಲ್ಲ, ಕನ್ನಡ
ಮಗುವಿನ ಸ್ವಚ್ಛಂದ ನಗು,
ಅರಳುವ ಸುಮದ ಚೆಲುವು,
ಮುಂಜಾವಿನ ಮಂಜ ಹನಿ,
ಪರಿಶುದ್ಧ ತಿಳಿ ಎಳನೀರಂತೆ

ಉಸಿರನಿತ್ತ ತಾಯ್ನುಡಿಯ ಕಾಪಿಟ್ಟು
ಜೀವ ಮುಡುಪಿಟ್ಟು ಉಳಿಸಿ, ಬೆಳೆಸುವ
ಕನ್ನಡ ಕಹಳೆಯನೂದತ ಜೊತೆಗೂಡಿ
ಕರುನಾಡ ಕೀರ್ತಿ ಬೆಳಗುತ ನಡೆಯುವ

ಸಿಹಿ ಸಕ್ಕರೆಯ ಮೆದ್ದಂತೆ ವರ್ಣಗಳು
ನಲಿದಾಡುತಿಹವು ಕನ್ನಡಿಗರ ಬಾಯೊಳು
ನಿತ್ಯ ಹರಿದ್ವರ್ಣದ ಚೆಲುವ ಬೀರುವವು
ಸೂರ್ಯ ಚಂದಿರರಂತೆ ಬೆಳಗುವವು

ಕೆಚ್ಚೆದೆಯ ಕಲಿಗಳಲಿ ಅಭಿಮಾನ ಹುಟ್ಟಿಸಿ
ಗಂಧದ ಸುಗಂಧವ ಎಲ್ಲೆಡೆ ಬೆರೆಸಿ
ಕನ್ನಡವ ರಸಬಳ್ಳಿಯೊಲು ಹಬ್ಬಿಸಿ
ಅಮೃತ ವಾಣಿಯ ಸುಚರಿತ್ರ ನಿರ್ಮಿಸುವೆವು

ಕರಿಮಣ್ಣ ಸೊಗಡ ಹೊಗಳಲೆನಿತು
ದಣಿಯದೀ ಮನವು ಇನಿತು
ಕನ್ನಡಿಗರೆನಲು ಅಭಿಮಾನವೆನಿತು
ಬಾಳ್ವೆವು ನಾಡನುಡಿಯ ಮಹಿಮೆಯನರಿತು

-ಉಷಾ ಗೊಬ್ಬೂರ, ಕಲಬುರಗಿ
*****