ವಿಜಯಪುರ, ನ.5: ಕಲ್ಪನೆಯ ಲೋಕದಲ್ಲಿ ವಿಹರಿಸಿ,ರವಿಗೆ ಕಾಣದ್ದು ಕವಿ ಕಂಡಿದೆ ಎಂದು ವಾಸ್ತವ ಮರೆತರೆ ಕವಿತ್ವಕ್ಕೆ ದ್ರೋಹ ಬಗೆದಂತೆ ಹೀಗಾಗಿ ಕವಿ ವಾಸ್ತವದ ಪ್ರತಿಬಿಂಬ ಎಂದು ಬೆನಕನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಅಧ್ಯಾಪಕ, ಸಾಹಿತಿ ಸಾಹೇಬಗೌಡ ಬಿರಾದಾರ ಅವರು ಹೇಳಿದರು. ರವಿವಾರ ಜಿಲ್ಲೆಯ ಮಿಣಜಗಿಯ ಗುರುಪಾದೇಸ್ವರ ಸಭಾ ಭವನದಲ್ಲಿ ರಾಜ್ಯ ಬರಹಗಾರರ ಒಕ್ಕೂಟ ವಿಜಯಪುರ ಜಿಲ್ಲಾ ಘಟಕದ ಮೂಲಕ ನಡೆದ ಜಿಲ್ಲಾ ಮಟ್ಟದ ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಯಾವ ನಾಡಿನಲ್ಲಿ ಕವಿಯ ಅಭಿವ್ಯಕ್ತಿಗೆ ಅವಕಾಶವಿದೆಯೋ ಅಂತಲ್ಲಿ ಕಾವ್ಯ ಸತ್ಯ ನಿಷ್ಠುರವಾಗಿ ಹೊಮ್ಮುತ್ತದೆ ಎಂದು ತಿಳಿಸಿದರು. ಜಾತಿ,ಮತ,ಪಂಥ,ಪಂಗಡ, ಪ್ರದೇಶಗಳ ಸೀಮೋಲ್ಲಂಘನ ಮಾಡದ ಕವಿ ಮತ್ತು ಕವಿತೆ ನಿಷ್ಪ್ರಯೋಜಕ. ಸರಿಯಿರುವುದನ್ನು ಗೌರವಿಸುವ,ದಾರಿ ಬಿಟ್ಟರುವುದಕ್ಕೆ ಚಾಟಿ ಬೀಸುವ ಕುಶಲತೆ ಕವಿಗಿರುತ್ತದೆ.ಅದನ್ನು ಕಾವ್ಯಮಯವಾಗಿ ಕಟ್ಟಿಕೊಡುವ ಜಾಣತನ ಬೆಳೆಸಿಕೊಳ್ಳಬೇಕು ಎಂದರು. ಪೆನ್ನು,ಗನ್ನು ಮುಖಾಮುಖಿಯಾದಾಗ ಕವಿ ಸತ್ತುಹೋಗುತ್ತಾನೆ.ಆದರೆ ಕವಿತೆ ಸಾಯುವುದಿಲ್ಲ.ಕವಿಗೆ ಒದಗುವ ಸಾವು ಕಾವ್ಯಲೋಕದಲ್ಲಿ ದುರಂತ ಎಂದು ಖೇದ ವ್ಯಕ್ತಪಡಿಸಿದರು.
—–