ಗಜಲ್
ಉಸಿರಿನ ಅಲೆಗಳು ಮೌನವಾಗುವುದರೊಳಗೆ ಕಡಲನು ಅರಿಯಬೇಕಿದೆ
ಸಮಯದ ಮುಳ್ಳಿನ ಗತಿ ನಿಲ್ಲುವುದರೊಳಗೆ ಕಾಲವನು ತಿಳಿಯಬೇಕಿದೆ
ಸುತ್ತೆಲ್ಲ ಹಸಿರಿದ್ದರೂ ಬಿಸಿಗಾಳಿಯ ಹೊದ್ದ ಮರುಭೂಮಿಯಾಗಿದೆ ಮನ
ಅಲೆಯುವ ಕಾಲುಗಳು ಕುಸಿಯುವುದರೊಳಗೆ ನಿಜ ಬದುಕನು ನೋಡಬೇಕಿದೆ
ಆಗಸದ ತುಂಬೆಲ್ಲ ಒಣಮಾತು ಅಹಮಿಕೆಯ ಬಂಜೆ ಮೋಡಗಳ ಹಿಂಡು
ನಾನೆಂಬ ತಂತು ಹರಿಯುವುದರೊಳಗೆ ನೀನು ಯಾರೆಂಬುದನು ಕಾಣಬೇಕಿದೆ
ಲಂಗುಲಗಾಮಿರದೆ ಗಾಳಿ ಕುದುರೆಯನೇರಿ ಹೊರಟಿಹನು ದಿಕ್ಕೆಟ್ಟ ಮನಸಿಜ
ನಾನು ನೀನಾಗುವುದರೊಳಗೆ ಎದೆಯ ತಳಪಾಯವನು ಮನಗಾಣಬೇಕಿದೆ
ತನ್ನಂತೆ ಇರುವ ಮನಸುಗಳನು ಹುಡುಕುತಲೇ ಬಸವಳಿದು ಹೋದನು ಸಿದ್ಧ
ನೋವಿನ ಸಾವಿರ ಕೊಳ್ಳಿ ಸುಡುವುದರೊಳಗೆ ಒಲವಿನ ದೀಪವನು ಧರಿಸಬೇಕಿದೆ
-ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿಲ್ಲೆ
—–