ಅನುದಿನ ಕವನ-೧೪೦೯, ಕವಿ: ಪ್ರಕಾಶ ಕೋನಾಪುರ, ಶಿವಮೊಗ್ಗ, ಕವನದ ಶೀರ್ಷಿಕೆ:ಪ್ರೀತಿ ಅಂದರೆ ಮತ್ತೇನಿಲ್ಲ

ಪ್ರೀತಿ ಅಂದರೆ ಮತ್ತೇನಿಲ್ಲ

ಪ್ರೀತಿ ಅಂದರೆ ಮತ್ತೇನಿಲ್ಲ
ಸ್ವಾತಂತ್ರ ಕಳೆದುಕೊಳ್ಳುವುದು
ಬಯಲಲ್ಲಿ ಅವಳ ಜೊತೆ ಸೇರಿ
ಆಲಯವಾಗುವುದು

ಪ್ರೀತಿ ಆಂದರೆ ಮತ್ತೇನಿಲ್ಲ
ನಾನು ಆವಿಯಾಗಿ
ಆಕಾಶದೊಳಗೆ ಲೀನವಾಗುವುದು
ಕಡಲೊಳಗೆ ಬೆರೆತ ಹನಿಯಾಗುವುದು

ಪ್ರೀತಿ ಅಂದರೆ ಮತ್ತೇನಿಲ್ಲ
ನಾನು ಕೆಳಗಿಳಿಯುವುದು
ಅವಳ ಜೊತೆ ಒಟ್ಟುಗೂಡಿ
ಸ್ಥಾವರವಾಗುವುದು

ಪ್ರೀತಿ ಅಂದರೆ ಮತ್ತೇನಿಲ್ಲ
ನಾನು ನಾನಾಗಿರುವುದು
ಅವಳು ಅವಳಂತಾಗಿರಲು ಬಿಟ್ಟು
ಒಟ್ಟೊಟ್ಟಿಗೆ ಹೆಜ್ಜೆ ಹಾಕುವುದು

ಪ್ರೀತಿ ಅಂದರೆ ಮತ್ತೇನಿಲ್ಲ
ಒಂದರ ಜೊತೆ ಇನ್ನೊಂದು
ಕೂಡಿಸಿದರೆ ಮೊತ್ತ ಒಂದೇ
ಆಗುವುದು

ಪ್ರೀತಿ ಅಂದರೆ ಮತ್ತೇನಿಲ್ಲ
ದ್ವೇಷವನ್ನು ಕಳೆದುಕೊಳ್ಳೋದು
ದ್ವೇಷದ ಬೆನ್ನ ಮೇಲೆ ಪ್ರೀತಿಯ
ಸವಾರಿ ಮಾಡಿಸೋದು


– ಪ್ರಕಾಶ ಕೋನಾಪುರ, ಶಿವಮೊಗ್ಗ