ಕೆನ್ನೆಯ ಮೊಡವೆಗಳು ಕವಿತೆಗೆ ರೂಪಕಗಳು!
ಬರೆದ ಪತ್ರಗಳನ್ನೆಲ್ಲ ಹರಿಯಬಹುದು;
ಕೊಟ್ಟ ಮಾತುಗಳನ್ನೆಲ್ಲ ಮರೆಯಬಹುದು;
ಮನದಲ್ಲಿ ನಿಂತಿರುವ ಭಾವನೆಗಳ ಹರಿಯಲಾದೀತೆ?
ನಿನ್ನೆಡೆಗಿನ ನನ್ನ ಒಲವನ್ನಿಡಿದು ಮುರಿಯಲಾದೀತೆ?
ಈ ನನ್ನೆದೆಯ ಹಾಡುಗಳ ಹೂಳಲಾದೀತೆ?
ನಿನ್ನೆಸರ ಜಪಿಸುವ ಹೃದಯಕಂಪನ ತಡೆಯಲಾದೀತೆ?
ನಿನ್ನ ಮದರಂಗಿ ಪಾದಗಳ ಹೆಜ್ಜೆ ಗುರುತಿನ್ನು ನನ್ನ ಮನೆಯಂಗಳದಿ ಮಾಸಿಲ್ಲವೆ!
ಗುಲಾಬಿ ಕೆನ್ನೆಗಳ ಮಿರಿಮಿರಿ ಮೊಡವೆಗಳ ಆಕರ್ಷಣೆಯಿನ್ನು ನನ್ನೆದೆಯಲ್ಲಿ ಅಳಿಸಿಲ್ಲವೆ!
ಕತ್ತು ಕೊಂಕಿಸಿ ದುಂಡುಮಲ್ಲಿಗೆ ಅರಳಿದಂತೆ ನಗುತ ಮಾತಾಡುವ ಮಧುರ ಧನಿಯಿನ್ನು ಕರಗಿಲ್ಲವೆ!
ಬಿಲ್ಲು ಹುಬ್ಬುಗಳ ಕುಣಿಸಿ ಜಾಜಿಹೂವ ಕಣ್ಗಳ ಅರಳಿಸಿ ಗದರಿಸಿ ಕರೆಯುವ ನಿನ್ನ ಪ್ರೀತಿಯು ಅಳಿದಿಲ್ಲವೆ!
ಹೊರಟೆ ಕಾಣದ ಕಡಲಲಿ ಹಗಲುಗನಸುಗಳ ಹಡಗು ಏರಿ;
ಗುರಿಯಿರದ ಬದುಕನ್ನು ದಿಕ್ಸೂಚಿಯಿರದ ದಿಕ್ಕಿನೆಡೆಗೆ ಸಾರಿ;
ಯಾಕಿಂತ ಅವಸರವಿತ್ತೇ ನಿನಗೆ?
ನನ್ನದಲ್ಲ ನಿನ್ನದೇ ಬೇಸರ ನನಗೆ!
ಪತ್ರಗಳ ಹರಿದೆ ಭಾಷೆಗಳ ತೊರೆದೆ;
ಜೊತೆನಡೆದ ಹಾದಿಯನ್ನೂ ಮರೆತೆ;
ನಿನ್ನಂತೆ ನೀನಿರಲು!
ನನಗಿಲ್ಲಿ ಉಳಿದಿರುವುದೊಂದೆ ಕಣ್ಣೀರು
ನನ್ನೆಲ್ಲ ಉಸಿರು ನಿನ್ನ ಧನಿಯಲ್ಲಿದೆ!
ನನ್ನೆಲ್ಲ ಆಸೆ ನಿನ್ನ ಮೊಡವೆಗಳಲ್ಲಿದೆ!
ಅವುಗಳ ಮೆರುಗು ಮಿಂಚುವ ಕೆನ್ನೆಯಲ್ಲಿ ನನ್ನೆಲ್ಲ ಕವಿತೆಗಳು ನಲಿಯುತ್ತಿವೆ!
ಅವು ನನ್ನ ಬದುಕಿಗೆ ಮಿನುಗು ತಾರೆಗಳು!
ಮುತ್ತಿಡದ ಕೆನ್ನೆಯ ಮೇಲಷ್ಟೆ ಮೊಡವೆಗಳಂತೆ!
ನನ್ನ ತಕರಾರೇನಿಲ್ಲ
ಕರೆದರು ಬರದಷ್ಟು ದೂರದಲ್ಲಿರುವೆ ನಾನು!
ಕವಿತೆಯಲ್ಲಷ್ಟೇ ನಿನ್ನ ಧ್ಯಾನಿಸುತ್ತಿರುವೆನು!
ಮೊಡವೆಗಳಿದ್ದಷ್ಟು ಹರೆಯವೇ!
ಇರಲಿ ಬಿಡು
ಅವು ಕವಿತೆಯ ರೂಪಕಗಳು!
-ಟಿ.ಪಿ.ಉಮೇಶ್ ಹೊಳಲ್ಕೆರೆ
——