ಅನುದಿನ‌ ಕವನ-೧೪೧೪, ಕವಯಿತ್ರಿ:ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ಹೀಗೇ ಒಮ್ಮೊಮ್ಮೆ……

ಹೀಗೇ ಒಮ್ಮೊಮ್ಮೆ……

ಹೀಗೇ ಒಮ್ಮೊಮ್ಮೆ….
ಎಲ್ಲೋ ಸುತ್ತಾಡಿ ಏನೋ ಹುಡುಕಾಡಿ
ಒಂಟಿ ಗುಡ್ಡದ ನೆತ್ತಿ ಏರಿ ನೆಟ್ಟನೆ ಕಾಲೂರಿ
ಹಾಸಿ ಹರಡಿದ ನೀಲ ಮುಗಿಲ ನೋಡಿ
ಮುಗಿಲೆ ನಿನಗಿಲ್ವೆ ಯೋಚನೆಯ ಕಾಡಾಟ
ಎಲ್ಲಿ ಸಿಕ್ತು ಈ ನಿರಾಳತೆ ಎಂದು ಕೇಳುವಾಸೆ

ಹೀಗೇ ಒಮ್ಮೊಮ್ಮೆ……
ಲಂಗು ಲಗಾಮಿಲ್ಲದೆ ಹಾರಿ ಕುಣಿದು ದಣಿದು
ಮನಸೆಲ್ಲ ಪೂರಾ ಸೋರಿ ಹೋಗಿ ಪಸೆ ಬಸಿದು
ಕಾಡ ನಡುವಿನ ಒಂಟಿ ಝರಿಯ ಜಾಡು ಹಿಡಿದು
ಅದ್ಹೇಗೆ ನಿರಂತರ ಪಸೆಯಾರದಂತೆ ಕಾಯುವಿ
ಎಲ್ಲಿ ಸಿಕ್ತು ಈ ನಿತಾಂತತೆ ಎಂದು ಕೇಳುವಾಸೆ

ಹೀಗೇ ಒಮ್ಮೊಮ್ಮೆ……
ಅಳತೆ ಆಳ ಇಲ್ಲದೆ ಎಲ್ಲೋ ಜಾರಿ ಏನೊ ಕಂಡು
ಇಷ್ಟುದ್ದ ಕೈ ಚಾಚಿ ಅಷ್ಟಗಲ ಬೊಗಸೆ ಒಡ್ಡಿ ಬಿಟ್ಟು
ಸಿಕ್ಕಷ್ಟು ಬಾಚಿ ಎದೆಯೊಳಗೆ ಹುದುಗಿಸಿ ಕಾಪಿಟ್ಟು
ಮರು ಗಳಿಗೆ ಭಾರವೊ ಏದುಸಿರು ಎದುರಿಸಿ
ಇಳೆಯಾಳಕಿಣುಕಿ ಅವಳ ಗುಟ್ಟು ಕೇಳುವಾಸೆ

ಹೀಗೇ ಒಮ್ಮೊಮ್ಮೆ…..
ಥಟ್ಟನೆ ಕೆರಳಿ ಮನ ಮುಖ ಮುರಿದು ಬುದ್ಧಿ
ಪಟ್ಟನೆ ಹೇಳಿ ಬಿಟ್ಟಾವೆ ಸಾಕಿನ್ನುಇಲ್ಲ ಜಾಗ ಇಲ್ಲಿ ಮುಗಿಲ ಮಾರಿಗೆ ತೂರಿ ಝರಿಯಳಗೆ ಜಾರಿಸಿ ಇಳೆಯಾಳಕಿಳಿಸೆಂದಾವೇನೋ ಕೇಳುವಾಸೆ
ಯಾಕೊ ಗೊತ್ತಿಲ್ಲ ಮರುಗಳಿಗೆ ಮೌನ ಎಲ್ಲೆಲ್ಲೂ!

-ಸರೋಜಿನಿ ಪಡಸಲಗಿ
ಬೆಂಗಳೂರು
—–