ಪದ್ಯ
ಪದ್ಯ ಅಷ್ಟು ಅಲುಗಾಡಿಸಿ ಬಿಡುತ್ತದೆಯೇ.?
ಅವನ ದರ್ಭಾರಿನ ಅಂಗರಕ್ಷನಿಗೂ ಅವನ ಪುಂಕಾನುಪುಂಕ ಭಾಷಣ ಸಾಕಾಗಿದೆ.
ದೆಹಲಿಯ ಗದ್ದುಗೆಯ ಗೋಡೆಯ ನಡುವೆ ಸಣ್ಣ ಬಿರುಕು ಹುಟ್ಟಿದೆ, ಆದರೂ ಸುರಕ್ಷಿತವೆಂಬ ಪದಗಳಿಗೇನು ಕಡಿಮೆ ಇಲ್ಲ.
ನಾನು ಪದ್ಯ ಬರೆಯುತ್ತೇನೆ ಅವನ ಹಾಡಿಹೊಗಳಿಕ್ಕಲ್ಲ
ಬದಲಿಗೆ ಅವನದೇ ಆದ ಚಿತ್ರಣ ಜನರ ಮುಂದಿಡಲು,
ಧರ್ಮದ ಪರದೆಯನ್ನು ಕಳಚಲು, ಸಾಸಿವೆಯಷ್ಟು ಸತ್ಯವನ್ನು ಗುಡ್ಡ ಮಾಡಿದ ಪರಿಯನ್ನು.
ಜನರ ನಂಬಿಕೆಗೆ ಉಳಿ ಹಿಂಡಿದ ಮನಸ್ಸುಗಳಿಗೆ ಭರವಸೆ ನೀಡಲು ಪದ್ಯ ಬೇಕೆ ಬೇಕು.
ನಡು ಬೀದಿಯಲ್ಲಿ ನಿಲ್ಲಿಸಿ ನನ್ನನ್ನು ಕೊಂದರೂ ಕೊಲ್ಲಬಹುದು, ಆಗ ಪದ್ಯಗಳು ನಿಲ್ಲುವುದಿಲ್ಲ
ಮತ್ತಷ್ಟು ಗಾಢವಾಗಿ ಹೊಮ್ಮುತ್ತವೆ ಆತನ ಗದ್ದುಗೆಯ ಬಿರುಕನ್ನು ನುಸುಳಿ.
ಕಗ್ಗತ್ತಲೆಯ ನಡುವೆ ಸಣ್ಣ ಬೆಳಕನ್ನು ನೀವು ಮರೆಮಾಚಿದಿರಿ, ಆದರೆ ಪದ್ಯ ಒಳಗಣ್ಣ ಬೆಳಕಾಗಿಸಿ ಕಾಯ್ದುಕೊಂಡಿದೆ, ಸಾಲುಸಾಲಿಗೂ ನಿನ್ನ ದರ್ಭಾರಿನ ಅರಾಜಕತೆ ಬಗೆಗೆ ಎದೆಗಟ್ಟಿಗೊಳಿಸುವಂತೆ ಬರೆದಿದ್ದೇವೆ.
ಒಂದೆ ಒಂದು ಪದ್ಯ ಇಷ್ಟು ಅಲುಗಾಡಿಸಿ ಬಿಡುತ್ತದೆಯೆ
ಇರಲೂಬಹುದು, ಪದ್ಯಕ್ಕೆ ಯಾರ ಹಂಗಿದೆ.
ನಾಡಕಟ್ಟುವವರ ನಡುವೆ ಹಾಡಾಗಿ, ಹೋರಾಟ ಹಕ್ಕಿಯಾಗಿ ಹೊರಹೊಮ್ಮುತ್ತಲೇ ಇದೆ ಈ ಪದ್ಯ.!
-ವಿಜಯಭಾಸ್ಕರ್ ಎಂ, ಸೇಡಂ
——