ಅನುದಿನ ಕವನ-೧೪೧೬, ಕವಿ: ಶಂಕರಾನಂದ ಹೆಬ್ಬಾಳ, ಇಳಕಲ್ಲು, ಕಾವ್ಯ ಪ್ರಕಾರ: ಗಜಲ್

ಗಜಲ್

ಮನವೇಕೊ ದುಗುಡದಿ ಮುಳುಗಿ ಸೊರಗುತಿದೆ
ಅವನಿಗಾಗಿ
ತನುವೇಕೊ ಮುದುಡಿ ಮೂಲೆಗೆ ಒರಗುತಿದೆ
ಅವನಿಗಾಗಿ

ಪ್ರಾಣಪಕ್ಷಿ ದೇಹವನು ಬಿಡುವುದೊಂದೆ ಬಾಕಿ
ಉಳಿಯಿತೇಕೆ
ಅನುರಾಗ ತೊರೆದು ಹೃದಯವಿದು ಮರುಗುತಿದೆ
ಅವನಿಗಾಗಿ

ಚಣಮಾತ್ರವೂ ಅಗಲಿರದೆ ಕಳೆದಿರುವ ದಿನಗಳು
ಲೆಕ್ಕಕ್ಕಿಲ್ಲ
ವಿನಾಕಾರಣ ಜೀವ ಒಂಟಿಯಾಗಿ ತಿರುಗುತಿದೆ
ಅವನಿಗಾಗಿ

ಗಾನಪಾಡುವ ಕೋಗಿಲೆಯು ಮೌನಧರಿಸಿ ಕುಳಿತಿದೆ
ನೋಡು
ಬನದ ಕುಸುಮವಿದು ಒಳಗೊಳಗೆ ಕೊರಗುತಿದೆ
ಅವನಿಗಾಗಿ

ಮಾನಿನಿಯ ಆರ್ತನಾದ ಅರುಹೀತು ಅಭಿನವನ
ಸಾಲು
ಮೇಣದಂತೆ ಉರಿದು ಪ್ರೀತಿಯಿದು ಕರಗುತಿದೆ
ಅವನಿಗಾಗಿ


-ಶಂಕರಾನಂದ ಹೆಬ್ಬಾಳ, ಇಳಕಲ್ಲು
—–