(ಬಿ)ಸಾಕಬೇಕಾದ ಕವಿತೆ
ಆ ಸಂಜೆ
ಅಪರೂಪಕ್ಕೆ ಆದ ಭೆಟ್ಟಿಯಲ್ಲಿ
ರಮಿಸಿಕೊಂಡು ಮುಗಿದ ಮೇಲೆ
ಅವನ ಮನಸ್ಸು ಮತ್ತೆಲ್ಲೊ ಇದೆ ಅಂತ ಗೊತ್ತಾಯಿತು
ಇನ್ನಾರದ್ದೊ ನೆನಪಲ್ಲಿ ನನ್ನ ಗಿಲ್ಲುತಿದ್ದ
ಏನೋ ಹದದಲ್ಲಿ ಇಲ್ಲಿ ಮೆಲ್ಲುತ್ತಿದ್ದ
ತಿಳಿಯದವಳಂತೆ ತಳುಕು ನಟಿಸುವುದು ಮೊದಲಿಂದಲೂ
ಸಿದ್ಧಿಸಿದ ವಿದ್ಯೆ ನನಗೆ.
ದೂರದ ಮರ ತೋರಿಸಿ
ಅದರ ಬಲಪಕ್ಕದ ದೊಡ್ಡ ಕವಲುಕೊಂಬೆಯ
ಕೆಳಗಿನ ತೆಳುಹರೆಯ ಮೇಲೆ
ಕುಳಿತಿರುವ ಉದ್ದಕೊಕ್ಕಿನ ನೀಲಿಹಕ್ಕಿಯೆಡೆ ನೋಡಿ ಅದು ನಾನು ಎಂದೆ
ಮಧುರ ಮೋಹದಲ್ಲಿ ಮೊಬೈಲು ತೀಡುತ್ತಿದ್ದವ ಫಕ್ಕನೆ ಎಚ್ಚರಾಗಿ ಬಹಿರಂಗಕ್ಕೆ ಬಂದು ಏನುಏನೆಂದ.
ಅದೋ ನೋಡು ಅಂದೆ
ಮುದ್ದೂ ಎಂದವ
ಮತ್ತೊಂದು ಪರಿಚಿತವಲ್ಲದ ಮುತ್ತು ಕೊಟ್ಟ.
,,,,
ಅದೇ ಮರದ ಕೆಳಗೆ ಅವರಿಬ್ಬರು ನಿಂತಿದ್ದಾಗ
ಕಾಗೆ ತಲೆಗೆ ಹಿಕ್ಕೆ ಹಾಕಿದ್ದು ,ಹಲ್ಲಿ ಭುಜಕ್ಕೆ ಬಿದ್ದಿದ್ದು ಪಕ್ಕದಲ್ಲೇ ಸರ್ಪ ಸರಿದು ಹೋದದ್ದು ,
ತಪ್ಪಿ ನಾಯಿಕಕ್ಕ ತುಳಿದಿದ್ದು
ಅವಳ ಜೀನ್ಸಿನ ಝಿಪ್ಪು ಕೈಕೊಟ್ಟಿದ್ದನ್ನು ಸಾಕಷ್ಟು ಮಂದಿ ನೋಡಿದ್ದರು
ಕ್ಷಮಿಸಿ
ನನಗೆ ಬ್ಲ್ಯಾಕ್ ಮ್ಯಾಜಿಕ್ಕಿನಲ್ಲಿ ಆಸಕ್ತಿಯಿಲ್ಲ
….
ನೀ
ವಿಶ್ವ ಪುರುಷರ ದಿನದ ಶುಭಾಶಯಗಳು.
ನಿಷ್ಠೆ ತಪ್ಪುವ ನಿಮ್ಮ ಸಹಜ ಸ್ವಾಭಾವಿಕ ಸ್ವಭಾವ ಮುಂದುವರೆಯಲಿ❤❤
-ನಂದಿನಿ ಹೆದ್ದುರ್ಗ
—–