ಇಂದು ಮನೆಯಲ್ಲಿ
ಅನ್ನವೇ ಬೇಯುತ್ತಿಲ್ಲ,
ಮನಸುಗಳು ಮಾತ್ರ
ಕುದಿಯುತ್ತಿವೆಯಲ್ಲ…!
ಅಡುಗೆ ಮನೆ,
ಸದಾ ಖಾಲಿ ಖಾಲಿ ಇರುತ್ತೆ.
ಫೋನಿಂದ ಕೂತಲ್ಲಿಗೆ
ಊಟ ತಿಂಡಿ ಬರುತ್ತೆ…!
ಮನೆಗಳಾಗುತ್ತಿವೆ
ಮಹಡಿಗಳಿಂದ ಎತ್ತರ , ಎತ್ತರ…
ಮನಸ್ಸುಗಳೇ ಆಗುತ್ತಿಲ್ಲ
ಹತ್ತಿರ , ಹತ್ತಿರ…!
ಸಂತೋಷ ಏನೆಂಬುದಕ್ಕೆ
ಸಿಗುತ್ತಿಲ್ಲ ಉತ್ತರ…!
ಅಂದು…ಬಿಸಿಲು, ಮಳೆ,
ಚಳಿಗೆ ಮೈ ಒಗ್ಗಿತ್ತು,
ಮನೆ ತಣ್ಣಗಿತ್ತು ,
ಒಲೆ ಹೊಗೆಯಾಡುತ್ತಿತ್ತು ,
ಬಿಸಿನೀರ ಹಂಡೆ
ಹಬೆಯಾಡುತ್ತಿತ್ತು…!
ಕಣಜದ ತುಂಬಾ
ದವಸ ಧಾನ್ಯ ತುಂಬಿತ್ತು,
ಬಂಧು ಬಳಗದ
ನಡುವೆ ಅನುಬಂಧವಿತ್ತು..
ಎಲ್ಲರೊಟ್ಟಿಗೆ ಮನೆಯೂ
ನಗೆಯಾಡುತಿತ್ತು…!
ಮನೆ ಚಿಕ್ಕದಾದ್ರೂ,
ಮನಸ್ಸು ವಿಶಾಲವಾಗಿತ್ತು.
ಇಂದು ,ಮನೆ ರಾಜನಿಲ್ಲದ
ಅರಮನೆಯಂತೆ,
ಸಕಲ ಸವಲತ್ತು ಗಳಿರುವ
ದರ್ಬಾರಿನಂತೆ,
ನೆರೆ ಮನೆಯ ಹಂಗಿಲ್ಲದ
ಸೆರೆಮನೆಯಂತೆ
ಆದ್ರೂ ಎಲ್ಲರಿಗೂ
ಬರೀ ದುಡ್ಡಿನದೇ
ಚಿಂತೆ ಚಿಂತೆ…
ಶುಭ ಕಾರ್ಯಗಳು,
ಸಂತೋಷ ಕೂಟಗಳು,
ಮನೆಬಿಟ್ಟು, ಹೋಟೆಲ್ಲುಗಳ
ಸೇರಿಕೊಂಡಿವೆ..
ಬಂಧುತ್ವ ಮಿತೃತ್ವಗಳು
ಬಂಧನದಲ್ಲಿವೆ..
ನೆಂಟರಿಷ್ಟರು ಮನೆಗೆ
ಬಂದರೆ, ಬರೀ ನಕ್ಕೂ
ನಗದೇ ಕೋಣೆ
ಸೇರಿಕೊಳ್ಳುತ್ತಿದ್ದಾರೆ
ಮನೆ ಮಕ್ಕಳು..
ಸ್ನೇಹ, ಸಂಬಂಧಗಳಲ್ಲೂ ತೋರಿಕೆ, ತಾತ್ಸಾರ, ನಂಬಿಕೆ ಒಗ್ಗಟ್ಟುಗಳಂತೂ ಬಹಳವೇ ದೂರ.!
-ಮಂಜು ಜಿ, ಆನೇಕಲ್