ಅನುದಿನ ಕವನ-೧೪೨೪, ಕವಿ: ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು

ಅವನು ಹೀಗೆ,
ಎದುರಿರುತ್ತಾನೆ
ಕಣ್ತಪ್ಪಿಸಿ ಮರೆಯಾಗುತ್ತಾನೆ
ಇವಳ ಬಣ್ಣ
ಗುರ್ತಿಸಿ ಕರೆಯುತ್ತಿರುತ್ತಾನೆ
ಕಂಗಳ ಹುಡುಕಿಸುತ್ತಾನೆ

ಎದುರಾದ
ವೇಳೆಗೆ ತಾನೇ
ಕಳೆದು ಹೋಗುತ್ತಾನೆ
ಎದೆಯ ಸ್ಥಿಮಿತ
ಹತೋಟಿಗೆ ಬರದಷ್ಟು

ಅವಳೇ
ಎದುರು ಕೂರಿಸಿ
ಈಗ ನೋಡು ನನ್ನ ಕಂಗಳೆಂದು
ಬಿಸಿ ಕಾಫಿ
ಹೀರಿಸುತ್ತಾಳೆ
ರುಚಿ ನಾಲಿಗೆಗೆ
ತಗುಲದು
ತಲೆತಗ್ಗಿಸಿ
ಕುಳಿತಿರುತ್ತಾನೆ
ಅವಳು ಕಾಣದಂತೆ
ನೋಡಲು
ಆಗುವುದೇ ಇಲ್ಲ

ಕಿಚಾಯಿಸುತ್ತಾಳೆ
ಮೂದಲಿಸುತ್ತಾಳೆ
ಎದುರಿಗೆ ನಿನ್ನ
ಆಟವಿಷ್ಟೇ ಎನ್ನುತ್ತಾಳೆ

ಈ ಭೇಟಿಗೊಂದು
ಹೆಸರು
ಹುಡುಕುತ್ತಾಳೆ
ಸಂಬಂಧದ
ಹೆಸರೇ ಬೇಕಾಗಿಲ್ಲದಿದ್ದಾಗ

ಸುಮ್ಮನೆ
ನಕ್ಕು ವಿದಾಯ
ಹೇಳುತ್ತಾರೆ
ದಿನವೊಂದು
ನೆನಪಾಗಿ ಉಳಿಯುತ್ತದೆ
ಜೊತೆಗೆ
ಇವನ ಒಲವ ಮಾತುಗಳು ಸಹ

-ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು
—–