ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ ‘ಸಂವಿಧಾನ ದಿನ’ ಆಚರಣೆ: ಸಂವಿಧಾನದಿಂದ ಸದೃಢ ಪ್ರಜಾಪ್ರಭುತ್ವ  -ನ್ಯಾಯಾಧೀಶೆ ಕೆ.ಜಿ.ಶಾಂತಿ

ಬಳ್ಳಾರಿ,ನ.27: ವಿಶ್ವದ ಎಲ್ಲಾ ಸಂವಿಧಾನಗಳಿಗಿಂತಲೂ ಶ್ರೇಷ್ಠ, ಲಿಖಿತ ಹಾಗೂ ಅತ್ಯಂತ ಬಲಿಷ್ಠ ಸಂವಿಧಾನವನ್ನು ಭಾರತ ದೇಶ ಹೊಂದಿದ್ದು, ಸಂವಿಧಾನದಿಂದ ಸದೃಢ ಪ್ರಜಾಪ್ರಭುತ್ವ ಹೊಂದಲು ಸಹಕಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ಅವರು ಹೇಳಿದರು.
ಜಿಲ್ಲಾ ನ್ಯಾಯಾಂಗ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ ನಗರದ ತಾಳೂರು ರಸ್ತೆಯ ಹೊಸ ನ್ಯಾಯಾಲಯ ಸಂಕೀರ್ಣದ ವಿಸಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಸಂವಿಧಾನ ಪ್ರಸ್ತಾವನೆ ಬೋಧಿಸಿ ಅವರು ಮಾತನಾಡಿದರು.
ಭಾರತ ಸಂವಿಧಾನವು 1948ರ ನವೆಂಬರ್ 26 ರಂದು ಅಂಗೀಕಾರಗೊಂಡು, 1950ರ ಜನವರಿ 26ರಂದು ಅನುಷ್ಠಾನಗೊಳಿಸಲಾಯಿತು. ಸ್ವಾತಂತ್ರೊತ್ಸವದ ಬಳಿಕ ಸಂವಿಧಾನ ರಚಿಸಲು 389 ಸದಸ್ಯರನ್ನು ಒಳಗೊಂಡ ಕರಡು ಸಮಿತಿ ರಚನೆ ಮಾಡಿ, ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು. 2 ವರ್ಷ 11 ತಿಂಗಳು 17 ದಿನಗಳ ಕಾಲ ಕೈಬರಹದಿಂದ ಸುದೀರ್ಘ ಸಂವಿಧಾನ ತಯಾರಾಗುತ್ತದೆ. ಅದರಲ್ಲಿ 1,17,369 ಪದಗಳು ಹೊಂದಿದೆ ಎಂದು ಅವರು ತಿಳಿಸಿದರು.
ಮೊದಲು ಸಂವಿಧಾನ ಜಾರಿಗೊಂಡಾಗ 395 ವಿಧಿಗಳು, 22 ಭಾಗ, 12 ಅನುಸೂಚಿಗಳನ್ನು ಹೊಂದಿದ್ದು, ಮೂಲ ಸಂವಿಧಾನ ಪ್ರತಿಗಳನ್ನು ಸಂಸತ್‌ನ ಗ್ರಂಥಾಲಯದಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ. ಪ್ರಸ್ತುತ 470 ವಿಧಿಗಳು, 25 ಭಾಗ, 12 ಅನುಸೂಚಿಗಳನ್ನು ಹೊಂದಿರುತ್ತದೆ ಎಂದು ಮಾಹಿತಿ ನೀಡಿದರು.
ಆಶೋತ್ತರ ಪೂರಕವಾದ ಸಂವಿಧಾನ ನೀಡಲು ಪ್ರಮುಖ ಪಾತ್ರ ವಹಿಸಿದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಅವರ ಸಮಿತಿಯನ್ನು ಈ ದಿನ ಸ್ಮರಿಸಬೇಕಿದೆ. ಸಂವಿಧಾನದ ಹಕ್ಕು ಮತ್ತು ಜವಾಬ್ದಾರಿಗಳನ್ನು ಅರಿತುಕೊಂಡು ಉತ್ತಮ ಜೀವನ ನಡೆಸಬೇಕು ಎಂದು ತಿಳಿಸಿದರು.
ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿದ ದೇಶವಾಗಿದ್ದು, ಜಾತಿ, ಧರ್ಮ, ಎಲ್ಲೆ ಮೀರಿ ನಾವೆಲ್ಲರೂ ಒಂದು ಎನ್ನುವ ಸಂಕಲ್ಪ ತೊಡಬೇಕಲ್ಲದೆ ಪ್ರತಿಯೊಬ್ಬ ನಾಗರೀಕರು ರಾಷ್ಟçದ ಏಕತೆ ಮತ್ತು ಅಖಂಡತೆ ಉಳಿಸಿಕೊಳ್ಳಲು ಶ್ರಮಿಸಬೇಕಿದೆ ಎಂದು ಹೇಳಿದರು.


ಜಿಲ್ಲಾ ನ್ಯಾಯಾಲದ ಕೌಟುಂಬಿಕ ನ್ಯಾಯಾಧೀಶರಾದ ಸಿದ್ಧಲಿಂಗ ಪ್ರಭು ಅವರು ಮಾತನಾಡಿ, ಸಂವಿಧಾನವು ಹಲವಾರು ಮಹನೀಯರ ಶ್ರಮ ಹಾಗೂ ದಶಕಗಳ ನಿರಂತರ ಹೋರಾಟದ ಪ್ರತಿಫಲದಿಂದ ದೊರೆತ್ತಿದ್ದು, ಇತರೆ ದೇಶಗಳ ಸಂವಿಧಾನಗಳ ಅವಲೋಕಿಸಿ ಬಹುದೊಡ್ಡದಾದ ಸಂವಿಧಾನ ರಚಿಸಲ್ಪಟ್ಟಿದೆ ಎಂದು ಹೇಳಿದರು.
ಕರ್ನಾಟಕ ಮೂಲದ ಬೆಣಗಲ್ ನರಸಿಂಹ ರಾವ್ ಅವರು ಕರಡು ಸಮಿತಿಯಿಂದ ಸಂವಿಧಾನ ರಚನೆಯಾಗುವ ಸಂದರ್ಭದಲ್ಲಿ ಕಾನೂನು ಸಲಹೆಗಾರರಾಗಿದ್ದು, ಹೆಮ್ಮೆಯ ವಿಚಾರ. ಸಂವಿಧಾನ ಉಳಿಸಿ-ಬೆಳೆಸುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಲಯದ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿದ್ಯಾಧರ ಶಿರಹಟ್ಟಿ, ಎಫ್‌ಟಿಎಸ್‌ಸಿ-1 ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ರಾಘವೇಂದ್ರ ಗೌಡ, ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ.ಪ್ರಮೋದ್, ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಾಸುದವ ಗುಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್.ಎನ್ ಹೊಸಮನೆ ಸೇರಿದಂತೆ ಇತರೆ ನ್ಯಾಯಾಧೀಶರು, ಅಧಿಕಾರಿಗಳು-ಸಿಬ್ಬಂದಿಗಳು, ಮತ್ತೀತರರು ಉಪಸ್ಥಿತರಿದ್ದರು.
———–