ರಾಜ್ಯ ತನ್ನ 69ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡ 50 ವರ್ಷಗಳ ಸಂಭ್ರಮಾಚರಣೆ ನಡೆಸುತ್ತಿದೆ. ಮುಖ್ಯಮಂತ್ರಿ ಹಾಗೂ ಎಲ್ಲಾ ಸಚಿವರು ಕನ್ನಡ ಉಳಿಸಿ ಬೆಳೆಸುವ ಬಗ್ಗೆ ಪುಂಕಾನುಪುಂಖವಾಗಿ ಮಾತನಾಡುತ್ತಿದ್ದಾರೆ. ಇದೆಲ್ಲವೂ ಸ್ವಾಗಾತಾರ್ಹ ಮತ್ತು ಕನ್ನಡ , ಕನ್ನಡಿಗ ಹಾಗೂ ಕರ್ನಾಟಕದ ಹೆಮ್ಮೆ .
ಆದರೆ ಮತ್ತೊಂದೆಡೆ , ಕರ್ನಾಟಕದ ಅಸ್ಮಿತೆಯನ್ನು ಎತ್ತಿ ಹಿಡಿಯಲು ಸ್ಥಾಪನೆಯಾದ ಕರ್ನಾಟಕದ ಕನ್ನಡ ವಿಶ್ವವಿದ್ಯಾಲಯ ಹಣದ ಕೊರತೆಯಿಂದ ಮುಚ್ಚುವ ಪರಿಸ್ಥಿತಿಗೆ ಬಂದಿದೆ.
ವಿಶ್ವವಿದ್ಯಾಲಯಕ್ಕೆ ಬರುತ್ತಿದ್ದ ಅನುದಾನಗಳು ಕುಸಿಯುತಿದ್ದು ಸಿಬ್ಬಂದಿ ಸಂಬಳ ಹಾಗೂ ನಿತ್ಯ ಖರ್ಚುಗಳಿಗೂ ಹಣವಿಲ್ಲದಂತಾಗಿದೆ .ಸುಮಾರು 1,200 ವಿದ್ಯಾರ್ಥಿಗಳನ್ನು ಓದುತ್ತಿರುವ ಈ ವಿಶ್ವವಿದ್ಯಾಲಯವು ತನ್ನ ಕನಿಷ್ಠ ವೆಚ್ಚವನ್ನು ಭರಿಸಲು ಅನುದಾನವಿಲ್ಲದೆ ಅನಿಶ್ಚಿತ ಭವಿಷ್ಯವನ್ನು ಎದುರು ನೋಡುತ್ತಿದೆ .
ಹಲವು ಖಾಯಂ ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇದ್ದು, ಹೊರಗುತ್ತಿಗೆ ಮತ್ತು ಹಂಗಾಮಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ .
ಅವರ ಸಂಬಳ ಪಾವತಿಸಲು ಹಣವಿಲ್ಲದಾಗಿದೆ . ಈ ಹಂಗಾಮಿ ಮತ್ತು ಹೊರಗುತ್ತಿಗೆ ನೌಕರರಿಗೆ ಸುಮಾರು ಒಂದು ವರ್ಷದಿಂದ ಸಂಬಳ ಪಾವತಿಯಾಗಿಲ್ಲ .
1991 ರಲ್ಲಿ 700 ಎಕರೆ ಕ್ಯಾಂಪಸ್‌ನಲ್ಲಿ ಮೂಲಸೌಕರ್ಯ, ಹಾಸ್ಟೆಲ್‌ಗಳು, 22 ಸಂಶೋಧನಾ ವಿಭಾಗಗಳು ಮತ್ತು 32 ಕಟ್ಟಡಗಳೊಂದಿಗೆ ಈ ವಿಶ್ವವಿದ್ಯಾಲಯವನ್ನು, ಕನ್ನಡವನ್ನು ಉತ್ತೇಜಿಸಲು ಮತ್ತು ಪೋಷಿಸಲು, ಭಾಷೆಯ ಬೆಳವಣಿಗೆಗೆ ಸಹಾಯ ಮಾಡಲು, ಸಂಶೋಧನೆ ಮತ್ತು ಇತರ ಅಧ್ಯಯನಗಳನ್ನು ಕೈಗೊಳ್ಳಲು ಮತ್ತು ಸಮಾಜದ ಅಂಚಿನಲ್ಲಿರುವ ಗುಂಪುಗಳಿಗೆ ಅವಕಾಶಗಳನ್ನು ಒದಗಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಸಹಾಯ ಮಾಡಲು ಉದ್ದೇಶಿಸಿ ಸ್ಥಾಪಿಸಲಾಯಿತು .
ಆದರೆ , ಅದೇ ವಿಶ್ವವಿದ್ಯಾಲಯ ಹಣಕಾಸಿನ ತೀವ್ರ ಬಿಕ್ಕಟ್ಟಿಗೆ ಒಳಗಾಗಿ ನಿರಂತರ ಕುಸಿತ ಕಂಡಿದ್ದು ಈಗ ಮುಚ್ಚುವ ಹಂತ ತಲುಪಿದೆ .
ಕನ್ನಡದ ಈ ಏಕೈಕ ವಿಶ್ವವಿದ್ಯಾಲಯವನ್ನು ಉಳಿಸಿ ಬೆಳಸಿ ಸುಸ್ಥಿರಗೊಳಿಸಲು ಅಗತ್ಯ ಅನುದಾನಗಳನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ನಾವು ಒಕ್ಕೊರಲಿನಿಂದ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ. ಮತ್ತು ಈ ವಿಶ್ವವಿದ್ಯಾಲಯ ಸಬಲೀಕರಣಕ್ಕಾಗಿ ಅಗತ್ಯವಿರುವ ಕ್ರಮಗಳನ್ನು ತಗೆದುಕೊಳ್ಳಲು ಒತ್ತಾಯಿಸುತ್ತೇವೆ.
-ನಿರಂಜನಾರಾಧ್ಯ ವಿ ಪಿ , ಬೆಂಗಳೂರು,
ಬಸವರಾಜ ಸೂಳಿಭಾವಿ ಗದಗ,
ಕೆ ಪಿ ಸುರೇಶ ಬೆಂಗಳೂರು,
ಡಾ. ಎಚ್ ಎಸ್ ಅನುಪಮಾ ಕವಲಕ್ಕಿ,
ಅನಿಲ ಹೊಸಮನಿ ವಿಜಯಪುರ,
ಸಿ.ಮಂಜುನಾಥ್ ಬಳ್ಳಾರಿ.