ಕೊಪ್ಪಳ ವಿವಿ: ಕಲ್ಯಾಣ ವಾಣಿ ಸುವರ್ಣ ಸಂಭ್ರಮ ಸಂಚಿಕೆ ಬಿಡುಗಡೆ

ಕೊಪ್ಪಳ, ನ.30:  ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ವಿಶ್ವ ವಿದ್ಯಾಲಯ ಶನಿವಾರ ಕರ್ನಾಟಕ ಸುವರ್ಣ ಸಂಭ್ರಮ, ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡ ಸಂಘ ಉದ್ಘಾಟನೆ ಸಮಾರಂಭ ಜರುಗಿತು.‌  ಇದೇ ಸಂದರ್ಭದಲ್ಲಿ ವಿವಿಯ ಪತ್ರಿಕೋದ್ಯಮ ವಿಭಾಗ ಪ್ರಕಟಿಸಿರುವ ‘ಕಲ್ಯಾಣ ವಾಣಿ ‘ಪತ್ರಿಕೆಯನ್ನು  ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆ ಸಮಿತಿಯ ಅಧ್ಯಕ್ಷ ಎಚ್.ಎಂ.ರೇವಣ್ಣ ಅವರು ಬಿಡುಗಡೆ ಮಾಡಿದರು.   ಮುಖ್ಯ ಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸಂಸದ ರಾಜಶೇಖರ ಹಿಟ್ನಾಳ, ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ,  ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಮುನಿರಾಜು ಹಾಗೂ ವಿವಿಧ ವಿಭಾಗಗಳ‌ ಮುಖ್ಯಸ್ಥರು, ಕುಲಸಚಿವರು, ಪ್ರಾಧ್ಯಾಪಕರು, ಉಪನ್ಯಾಸಕರು, ವಿದ್ಯಾರ್ಥಿಗಳು  ಮತ್ತಿತರರು ಇದ್ದರು.