ಕುವೆಂಪು ವಿವಿ: ಪರಸ್ಪರ ಮತ್ತು ಸಹ್ಯಾದ್ರಿ ಸಿರಿಗಂಧ 2024:    ವಿದ್ಯಾರ್ಥಿಗಳು ಜ್ಞಾನ ಸಂಪಾದಿಸಲು ಶ್ರಮವಹಿಸಬೇಕು -ಎಸ್.ಎನ್. ರುದ್ರೇಶ್

ಶಂಕರಘಟ್ಟ, ಡಿ 2: ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೆಚ್ಚಿನ ದಕ್ಷತೆಯಿಂದ ಕಲಿಕೆ, ಜ್ಞಾನ ಸಂಪಾದನೆಯಲ್ಲಿ ತೊಡಗಿ ಪೋಷಕರ ಶ್ರಮ, ನಿರೀಕ್ಷೆಗಳಿಗೆ ನ್ಯಾಯ ಒದಗಿಸಿಗಬೇಕು ಎಂದು ಕುವೆಂಪು ವಿವಿಯ ಹಳೆಯ ವಿದ್ಯಾರ್ಥಿ ಮತ್ತು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಕುಲಸಚಿವ ಎಸ್ ಎನ್ ರುದ್ರೇಶ್ ಅವರು ಹೇಳಿದರು.    ಕುವೆಂಪು ವಿವಿಯ ಪಠ್ಯೇತರ ಚಟುವಟಿಕೆ ವಿಭಾಗದ ವತಿಯಿಂದ ವಿವಿಯ ಬಸವ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ “ಪರಸ್ಪರ” ಹಾಗೂ ಅಂತರ್ ವಿಭಾಗಗಳ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ “ಸಹ್ಯಾದ್ರಿ ಸಿರಿಗಂಧ” ಕಾರ್ಯಕ್ರಮಕ್ಕೆ ಚಾಲನೆ‌ನೀಡಿ ಅವರು ಮಾತನಾಡಿದರು.                             ‌ ‌‌ಸೆಮಿಸ್ಟರ್ ಪದ್ಧತಿಯಿಂದಾಗಿ ತರಗತಿಗಳಲ್ಲಿ, ಕಲಿಕೆಯಲ್ಲಿ ಸಾಕಷ್ಟು ವ್ಯತ್ಯಯವಾಗುತ್ತಿದೆ. ಪಠ್ಯದ ಆಚೆಗೂ ಹೆಚ್ಚು ಓದಬೇಕು. ಜ್ಞಾನವನ್ನು ಕಾಯಕವಾಗಿಸಬೇಕು. ಇಲ್ಲವಾದರೆ ಜ್ಞಾನ ವ್ಯರ್ಥ್ಯವಾಗುತ್ತದೆ, ಇದಕ್ಕಾಗಿ ಮೊದಲು ಸ್ವಾಭಿಮಾನಿಗಳಾಗಿ ಎಂದರು.

ವಿದ್ಯಾರ್ಥಿಗಳಿಗೆ ಕುವೆಂಪು ಅವರ ಬರಹಗಳಿಂದ ಆರಂಭಿಸಿ ಇಂದಿನ ಹಲವು ಸಂಪನ್ಮೂಲ ವ್ಯಕ್ತಿಗಳ ಮೂಲಕ ಶಿಕ್ಷಣದ ಮೌಲ್ಯಗಳು ದೊರೆಯುತ್ತಿವೆ. ಇವುಗಳನ್ನು ಪಾಲಿಸುತ್ತಲೇ ದಾಟಿಸುವ ಬದ್ಧತೆಯನ್ನು ನಾವು ತೋರಬೇಕು ಎಂದರು.                              ಹೊಸ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಕೇವಲ ಬೋಧನೆ ಕೇಳುವವರಾಗಿ ಉಳಿದಿಲ್ಲ. ಗ್ರಂಥಾಲಯ, ಆನ್ಲೈನ್ ಪುಸ್ತಕಗಳ ಮೂಲಕ ಪಠ್ಯಗಳನ್ನು ಓದಿಕೊಂಡು ತರಗತಿಗೆ ಬರಬೇಕು, ಪ್ರಶ್ನಾ ಮನೋಭಾವ ಹೆಚ್ಚಿಸಿಕೊಳ್ಳಬೇಕು. ಶಿಕ್ಷಕರು ಕಲಿಸುತ್ತಾ, ಕಲಿಯುತ್ತಾ ಬೆಳೆಯಬೇಕು, ಬೆಳಸಬೇಕು ಎಂದು ಕುವೆಂಪು ವಿವಿಯ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಸಲಹೆ ನೀಡಿದರು.

ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವಿವಿಯ ಗಣಿತಶಾಸ್ತ್ರ ಪ್ರಾಧ್ಯಾಪಕ ಪ್ರೊ. ಬಿ ಜೆ ಗಿರೀಶ್ ಮತ್ತು ಔದ್ಯೋಗಿಕ ರಸಾಯನಶಾಸ್ತ್ರದ ಪ್ರೊ. ಬಿ ಈ ಕುಮಾರಸ್ವಾಮಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕುವೆಂಪು ವಿವಿಯ ಕುಲಸಚಿವ ಏ ಎಲ್ ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್ ಎಂ ಗೋಪಿನಾಥ್, ಹಣಕಾಸು ಅಧಿಕಾರಿ ಹೆಚ್ ಎನ್ ರಮೇಶ್, ವಿದ್ಯಾರ್ಥಿ ಕ್ಷೇಮಾಪಲನ ಅಧಿಕಾರಿ ಪ್ರೊ. ಪ್ರಶಾಂತ್ ನಾಯ್ಕ, ಪಠ್ಯೇತರ ಚಟುವಟಿಕೆ ವಿಭಾಗದ ಸಂಚಾಲಕ ಡಾಕ್ಟರ್ ನೆಲ್ಲಿಕಟ್ಟೆ ಸಿದ್ದೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಯ ವಿವಿಧ ವಿಭಾಗಗಳ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು

ಇದೇ ಸಂದರ್ಭದಲ್ಲಿ ಕುವೆಂಪು ವಿವಿಯ ಪಠ್ಯೇತರ ಚಟುವಟಿಕೆ ವಿಭಾಗದಿಂದ ಆಯೋಜಿಸಿದ್ದ ಅಂತರ್ ವಿಭಾಗಗಳ ಸಾಂಸ್ಕೃತಿಕ ಸ್ಪರ್ಧೆ ಸಹ್ಯಾದ್ರಿ ಸಿರಿಗಂಧವನ್ನು
ಸಾಹಿತಿ, ಗಾಯಕ ಹನಸೋಗೆ ಸೋಮಶೇಖರ್ ಅವರು ಉದ್ಘಾಟಿಸಿದರು.
ಅವರು ಅನಿಕೇತನ ಗೀತೆ ಹಾಗು ತಾವು ರಚಿಸಿ, ಸಂಗೀತ ಸಂಯೋಜಿಸಿದ ಸಂವಿಧಾನ ಶಿಲ್ಪಿ ಮತ್ತು ಮರೆಯೋದುಂಟೆ ನಾಲ್ವಡಿ ಕೃಷ್ಣರಾಜ ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.

—–