ಅನುದಿನ ಕವನ-೧೪೩೬, ಕವಿ: ಪೀರ್ ಭಾಷ, ಹೊಸಪೇಟೆ

ಈ ದಿನ


ನೆಲದ ಹಣತೆಯ ಮೇಲೆ
ಬೆಳಗಿದ ದೀಪವೊಂದು
ಆರಿದ ದಿನ!

ಬಾಬಾ,
ಆ ಸೂರ್ಯನೂ ದಣಿದು
ಮಲಗಿದ ಹೊತ್ತು
ತಾವಿನ ಕತ್ತಲಲ್ಲಿ
ನಮ್ಮ ಕಣ್ಣಾದಿರಿ,
ಎದೆಯ ಬೆಳಕಾದಿರಿ
ಕೈ ಕಾಲ್ಗಳ ಕಸುವಾದಿರಿ..
ಈಗ…ಮತ್ತೆ
ಸೋತ ಕಾಲು, ಕಣ್ಣಮಂಜು…
ಬಾಬಾ…
ಈ ಚರಿತ್ರೆಯೇಕೆ ಮರಳಿ ಬರುವ ಹಾದಿಗಳನ್ನು
ಅಳಿಸಿಹಾಕಿದೆ!

ಧನ್ಯವಾದಗಳು ಕಾಲವೇ
ನಡೆದವರ ಬೆನ್ನ ಹಾದಿ ಅಳಿಸಿದ್ದಕ್ಕೇ
ಬುದ್ಧನ ನಂತರ ಬಾಬಾರ ಬೆಳಕು ಹರಿದದ್ದು
ಪ್ರತಿ ಮಳೆಗಾಲದ ಬಳಿಕವೂ
ಬೇಸಿಗೆಯ ಇರವು ಅರಿವಾದದ್ದು.

ಅಗೋ..!
ನಮ್ಮ ಮಕ್ಕಳ ಕಣ್ಣುಗಳಲ್ಲಿ
ಮೋಡಗಳು ಮಿಂಚುತ್ತಿವೆ
ಎದೆಯಲ್ಲಿ ಕೇಳಿಸುತ್ತಿವೆ ಗುಡುಗು
ಮತ್ತೆ ಮಳೆಯಾಗದಿದ್ದೀತೇ?

ಇದು ಬುದ್ಧಭೂಮಿ
ಹಣತೆಯ ಕಿರಣವೇ ಇಲ್ಲಿ ಹಾದಿಯಾಗಿದೆ
ಇಗೋ..ಎಷ್ಟೊಂದು ಹಣತೆಗಳು
ನಡೆಯುವುದಷ್ಟೇ ಇಲ್ಲಿ ಬಾಕಿಯಿದೆ.


– ಪೀರ್ ಭಾಷ, ಹೊಸಪೇಟೆ