ಸಮಾನತೆ, ರಕ್ಷಣೆ ಕಲ್ಪಿಸಿದ ಸಂವಿಧಾನ‌ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ದೇಶದ ಮಹಿಳೆಯರು ಕೃತಜ್ಞರಾಗಿರಬೇಕು -ಸಾಮಾಜಿಕ ಹೋರಾಟಗಾರ್ತಿ ಅಕ್ಷತಾ ಕೆ ಛಲವಾದಿ

ಬಳ್ಳಾರಿ, ಡಿ.7: ದೇಶದ ಎಲ್ಲಾ‌ಜಾತಿ, ಧರ್ಮದ ಮಹಿಳೆಯರಿಗೆ ಸಮಾನ ಅವಕಾಶ, ರಕ್ಷಣೆ, ಸೌಲಭ್ಯ, ಕಲ್ಪಿಸಿದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.‌ಬಿ ಆರ್ ಅಂಬೇಡ್ಕರ್ ಅವರಿಗೆ ದೇಶದ ಸರ್ವ ಮಹಿಳೆಯರು ಕೃತಜ್ಞರಾಗಿರಬೇಕು ಎಂದು ಸಾಮಾಜಿಕ ಹೋರಾಟಗಾರ್ತಿ ಹಾವೇರಿಯ ಅಕ್ಷತಾ ಕೆ ಛಲವಾದಿ ಅವರು ಹೇಳಿದರು.
ಶುಕ್ರವಾರ ಸಂಜೆ ನಗರದ ಡಾ. ಬಿ ಆರ್ ಅಂಬೇಡ್ಕರ್ ಭವನದ ಆವರಣದಲ್ಲಿ ಬಾಬಾಸಾಹೇಬರ ಪ್ರತಿಮೆ ಬಳಿ ಬಳ್ಳಾರಿ ಜಿಲ್ಲಾ ಛಲವಾದಿ ನೌಕರರ ಕಲ್ಯಾಣ ಸಂಘ ಹಾಗೂ ದಸಾಪ‌ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಜ್ಞಾನಿ ಡಾ.‌ಬಿ ಆರ್ ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಿಳೆ ಮನಸ್ಸು ಮಾಡಿದರೆ ದೇಶದಲ್ಲಿ ಕ್ರಾಂತಿಯನ್ನು ಹುಟ್ಟು ಹಾಕಬಲ್ಲಳು ಎಂದು ಬಾಬಾಸಾಹೇಬರು ನಂಬಿದ್ದರು. ಮೌಡ್ಯ, ಅಂಧಶ್ರದ್ಧೆದಿಂದ ಹೊರಬಂದು ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣರಾಗಬೇಕು ಎಂದು ತಿಳಿಸಿದರು.
ಧರ್ಮ, ದೇವರ ಹೆಸರಿನಲ್ಲಿ ಮಹಿಳೆಯರನ್ನು ಬೀದಿಗೆ ತಂದು ನಿಲ್ಲಿಸುವವರ ಕುತಂತ್ರಗಳ ಬಗ್ಗೆ ಜಾಗೃತರಾಗಬೇಕಿದೆ ಎಂದು ಹೇಳಿದರು.
ವಿಶ್ವದಲ್ಲೇ ಶ್ರೇಷ್ಟ ಎಂದು‌ ಹೆಗ್ಗಳಿಗೆ ಪಾತ್ರರಾಗಿರುವ
ಭಾರತದ ಸಂವಿಧಾನ ಅಪಾಯದಲ್ಲಿದೆ. ಪಟ್ಟಭದ್ರರು, ಸಮಾನತೆಯ ವಿರೋಧಿಗಳು ವ್ಯವಸ್ಥಿತವಾಗಿ ಸಂವಿಧಾನದ ಆಶಯಗಳಿಗೆ ಕೊಳ್ಳಿ ಇಡುತ್ತಿದ್ದಾರೆ. ಶೋಷಿತರು, ಪ್ರಜ್ಞಾವಂತರು, ಪ್ರಗತಿಪರರು, ಅಹಿಂದ ವರ್ಗಗಳು ಒಗ್ಗಟ್ಟಾಗಿ ಸಂವಿಧಾನ ವಿರೋಧಿಗಳಿಗೆ ಪಾಠ ಕಲಿಸಬೇಕು ಎಂದರು.
ಬುದ್ಧ ಬಸವ ಬಾಬಾಸಾಹೇಬರ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ಬಳ್ಳಾರಿ ಜಿಲ್ಲಾ ಛಲವಾದಿ ನೌಕರರ ಸಂಘ ರಾಜ್ಯದಲ್ಲಿ ಮಾದರಿಯಾಗಲಿ ಎಂದು ಅಕ್ಷತಾ ಹಾರೈಸಿದರು.


ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಪ್ರೊ.ಗೌರಿ ಮಾಣಿಕ್ ಮಾನಸ ಅವರು, ಪ್ರಸ್ತುತ ದೇಶದ ಕೋಟ್ಯಾಂತರ ಶೋಷಿತರು, ನೌಕರರು ಉತ್ತಮ‌ಜೀವನ ನಡೆಸಲು ಕಾರಣ ಬಾಬಾಸಾಹೇಬರು ಕಾರಣ. ಇವರು ಕೊಟ್ಟ ಬಿಕ್ಷೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಛಲವಾದಿ ನೌಕರರ ಕಲ್ಯಾಣ ಸಂಘದ ಗೌರವಾಧ್ಯಕ್ಷ ಡಾ. ಸಿ ಎಚ್ ಸೋಮನಾಥ, ಪ್ರಧಾನ ಕಾರ್ಯದರ್ಶಿ ಹನುಮಪ್ಪ ಸಿ, ಉಪಾಧ್ಯಕ್ಷರಾದ ಲಕ್ಷಿಕಾಂತಯ್ಯ ಸಿ ಎಸ್, ಪ್ರೊ.‌ ಎ.ಎಸ್. ಬಸವರಾಜ, ನಾಗರಾಜ್ ಸಿ, ಪದಾಧಿಕಾರಿಗಳಾದ ವಿಲಾಸ್ ಮಾನಕರ್, ಈರಣ್ಣ ಮುದೇನೂರು, ಸದಸ್ಯರುಗಳಾದ ಡಾ. ಕವಿತಾ ಸಾಗರ, ಪ್ರೊ. ಜಿ.ಕೆ ಸಂತೋಷ್, ಪ್ರೊ.‌ನಿರಂಜನ್, ಡಾ. ರಾಜೇಂದ್ರ ಪ್ರಸಾದ್, ರಾಜಶೇಖರ ಮೂರ್ತಿ, ನಾಗೇಂದ್ರಪ್ಪ, ಭೀಮರಾವ್ ಐಎಎಸ್ ಕೋಚಿಂಗ್ ಸೆಂಟರ್‌ನ ಶೇಖರಪ್ಪ ಕುರುವಳ್ಳಿ, ರುದ್ರಯ್ಯ, ಮತ್ತು ದಸಾಪ ಜಿಲ್ಲಾಧ್ಯಕ್ಷ ಡಾ. ನಾಗಪ್ಪ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಛಲವಾದಿ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಗೂಳಪ್ಪ ಸಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಸಿ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ದೀಪ ನಮನ: ಆರಂಭದಲ್ಲಿ ಸಂಘದ ಸದಸ್ಯರು, ಪದಾಧಿಕಾರಿಗಳು ದೀಪ ನಮನ ಸಲ್ಲಿಸುವ ಮೂಲಕ ಬಾಬಾಸಾಹೇಬರನ್ನು ಶ್ರದ್ಧಾಪೂರ್ವಕವಾಗಿ‌ ಗೌರವ ಸಲ್ಲಿಸಿದರು.