ಅನುದಿನ ಕವನ-೧೪೩೮, ಕವಯಿತ್ರಿ: ರೂಪ ಗುರುರಾಜ, ಬೆಂಗಳೂರು, ಕವನದ ಶೀರ್ಷಿಕೆ: ಅವಳ ಚೆಲುವು

ಅವಳ ಚೆಲುವು

ಅವಳು ಸಿಂಗರಿಸಿಕೊಂಡ ಬಗೆಯಲ್ಲಿಲ್ಲ
ನೀ ಸೋತಾಗಲೆಲ್ಲಾ ನಿನ್ನೊಡನೆ ನಿಲ್ಲುವುದರಲ್ಲಿದೆ …

ನುಣುಪಾದ ರೇಶಿಮೆಯ ಕೂದಲಲ್ಲಿಲ್ಲ
ತಪ್ಪುಗಳನ್ನು ಕ್ಷಮಿಸಿ ಆಲಂಗಿಸಿ
ಕೊಳ್ಳುವುದರಲ್ಲಿದೆ …..

ನೀಳ  ಕಣ್ಸೆಳೆಯುವ ದೇಹದಲ್ಲಿಲ್ಲ
ಆಗಾಗ ಚಿಮ್ಮಿಬಿಡುವ ಕಣ್ಣೀರ ಮರೆಸಿ ನಗುವುದರಲ್ಲಿದೆ…..

ಅವಳು ಧರಿಸಿರುವ ಆಭರಣಗಳಲ್ಲಿಲ್ಲ
ಒಮ್ಮೆ ಕತ್ತು ಹೊರಳಿಸಿ ನಿನ್ನ ನೋಡುವ ನೋಟದಲ್ಲಿದೆ …..

ಅವಳು ತೊಡುವ ಬಣ್ಣಬಣ್ಣದ ಬಟ್ಟೆಗಳಲ್ಲಿಲ್ಲ
ಸದಾ ನಿನ್ನೊಳಿತಿಗಾಗಿ ಹಾರೈಸುವ ಹೃದಯದಲ್ಲಿದೆ …..

ಆಗಾಗ ಮೂಡಿಬಿಡುವ ಅಸಹನೆ
ವೈಮನಸ್ಸನ್ನು  ಮರೆತು ಮಾತನಾಡಿಸುವ ಅಕ್ಕರೆಯಲ್ಲಿದೆ….

ನಿನ್ನಲ್ಲೇ ನಿನಗೆ ನಂಬಿಕೆ ಇರದಿದ್ದಾಗಲೂ
ಮತ್ತೆ ನಿನ್ನ ಹುರಿದುಂಬಿಸಿ ಮುನ್ನಡೆಸುವ
ಛಲದಲ್ಲಿದೆ…

ಆಡಲು ಮಾತುಗಳೇ ಇಲ್ಲದಿದ್ದಾಗಲೂ
ಅವಳು ಬರೆಯುವ ಸಾಲುಗಳಲ್ಲಿ, ಗುನುಗುವ ಹಾಡುಗಳಲ್ಲಿದೆ ….

ಒಮ್ಮೆ ಕಣ್ತೆರೆದು ನೋಡು  ಅವಳನ್ನು
ನಿನ್ನ ಇಡೀ ಪ್ರಪಂಚವೇ ಅವಳ ಈ  ಚೆಲುವಿಂದ ತುಂಬಿದೆ…….


–ರೂಪ ಗುರುರಾಜ, ಬೆಂಗಳೂರು