ಅಮೃತಮತಿ
ಅದೆಂತಹ ಸುಖ?
ಆ ಸುಖದ ಮುಂದೆ ಆ ಕ್ಷಣ ಎಲ್ಲವೂ ನಗಣ್ಯ!
ಸವಿದ ಸುಖ ಮರೆತು ನನ್ನ ನೀ ಅಲಕ್ಷಿಸುವಾಗ
ಮನವಿದು ನಿನ್ನ ಚಿತ್ತಚಂಚಲತೆ ಧಿಕ್ಕಾರ ಕೂಗುತ್ತದೆ.
ಬೇಡವೇ ಬೇಡ ನಿನ್ನ ಸಾಂಗತ್ಯ ಎಂದುಕೊಂಡಾಗಲೆಲ್ಲಾ
ನಿನ್ನ ಮೋಹಕ ನಗುವಿನ ವದನ!!??
ಗತ್ಯಂತರವಿಲ್ಲದೇ ನಿನ್ನ ಬಾಹುಬಂಧನದಿ ಸೆರೆಯಾಗುವಂತೆ ಮಾಡಿಬಿಡುತ್ತದೆ..
ನನ್ನೇ ನಾ ಶಪಿಸಿಕೊಳ್ಳುವೆ
ಮಗದೊಮ್ಮೆ ನನ್ನೇ ನಾ ನಿನಗರ್ಪಿಸಿ ಶೂನ್ಯದೆಡೆಗೆ ಸಾಗಿಬಿಡುವೆ.
ನೀ ನಿಲ್ಲದೇ ನಾನಿಲ್ಲವೋ…!?
ನಾನಿಲ್ಲದೇ ನೀನಿಲ್ಲವೋ!?
ಅರ್ಥವಾಗದ ಗೋಜಲು ನನಗೆ
ನೀ ನಾನಾಗಿ..ನಾ ನೀನಾಗಿ ಸೃಷ್ಟಿ ಸಂಚಯಕೆ ಕಾರಣವಾಗಿದ್ದಂತೂ ಸುಳ್ಳಲ್ಲ.
ನೀ ಮಳೆಯಾ???
ನಾ ಇಳೆಯಾ!???
ಅರಿಯೇ ನಾ….
ನೀ ಮಳೆಯಾಗುವಾಗ ನಾ ಇಳೆಯಾಗಿ ನಿನ್ನೆಲ್ಲಾ ಭಾವಗಳನು ನಿತ್ಯ ಹರಿದ್ವರ್ಣ ಮಾಡಿದೆ.
ನಾ ಭಾವೋತ್ಕರ್ಷದಿ ಮಳೆಯಾಗುವಾಗ
ನೀ ಇಳೆಯಾಗಿ..
ಹಸಿರುಕ್ಕಿಸಲೇ ಇಲ್ಲ.!!
ಇಳೆಮಳೆಯ ಸಮ್ಮಿಲನದಿ ಮನದ ಕೊಳೆ ಕೊಚ್ಚಿ ಹೋಗದಿದ್ದುದೇ ವಿಪರ್ಯಾಸ!
ಹೊಳೆಯಾದೆ ನಾ
ನಿನ್ನ ಭಾವಕಡಲಿನ ಗರ್ಭ ಸಂಗಮಿಸಿ ಸಂಭ್ರಮಿಸಲೆಂದೇ!
ಬದಲಾಗಲಿಲ್ಲ ನೀ!!
ಸಿಹಿಯಾದ ನಾ
ನಿನ್ನೊಡಲ ಸೇರಿ ನಿನ್ನಂತೆ ಉಪ್ಪುಪ್ಪಾಗಿ ಸ್ವಾರ್ಥಿಯಾಗಿದ್ದು ನಿನ್ನಿಂದಲೇ!
ಆಗಾಗ ಜನ್ನನ ಯಶೋಧರ ಚರಿತೆಯ ‘ಅಮೃತಮತಿ’ ನನ್ನ ಮನದ ಕಲ್ಪನೆಯಲಿ ಅವಾಹನೆಯಾದರೆ ಚಡಪಡಿಸುವೆಯೇಕೆ?
-ಶಾಂತಾ ಪಾಟೀಲ್, ಸಿಂಧನೂರು
—