ನನ್ನ ಕನ್ನಡ ನಾಡು..
ಹಸಿರ ನಾಡಿದು ನನ್ನುಸಿರ ನಾಡಿದು
ಖನಿಜಗಳ ಬೀಡಿದು
ಖಗ-ಮೃಗವು ನಲಿದಾಡುವ ನೆಲವಿದು
ವೀರ ಧೀರರ ಕವಿರತ್ನ ಪುಂಗವರ ಕಂಡ ನಾಡಿದು
/ನನ್ನ ಕನ್ನಡ ನಾಡಿದು/
ಎರೆ ಕೆಂಗು ಮಣ್ಣಿದು ತೆಂಗು ಕಂಗು ಕಾಫಿಯ ಕಂಪು ಹೊಮ್ಮುವ ನಾಡಿದು
ಧಾನ್ಯಗಳ ಕಣಜವ ಹೊತ್ತ ಸಿರಿನಾಡಿದು
ದಾನ ಧರ್ಮಕೆ ಆತಿಥ್ಯಕೆ ಹೆಸರಾದ ಪುಣ್ಯಭೂಮಿಯಿದು
/ನನ್ನ ಕನ್ನಡ ನಾಡಿದು/
ದಕ್ಷಿಣ ಗಂಗೆಯು ಜೀವವಾಗಿ ಹರಿದಿಹಳು ನೋಡಿಲ್ಲಿ
ನಾಡಿಗೇ ಅನ್ನ ಪಾನವ ನೀಡಿಹರು ತುಂಗಾ-ಭದ್ರೆಯರಿಲ್ಲಿ
ಸರ್ವಧರ್ಮದವರಿಹರೀ ಸಾಮರಸ್ಯದ ಗೂಡಲ್ಲಿ… ಕಲೆಗಳ ನಾಡು ದಾಸರ ಶರಣರ ಶ್ರೀಗಂಧದ ಬೀಡು
/ನನ್ನ ಕನ್ನಡ ನಾಡಿದು /
ಕಾವೇರಿಯಿಂದ ಗೋದಾವರಿಗಿದ್ದ ನಾಡಿದು ಅಷ್ಟ ದಿಕ್ಕಲ್ಲೂ ಪರಭಾಷಾ ಪ್ರಾಬಲ್ಯಗಳ ಕೆಚ್ಚೆದೆಯಿಂ ಎದುರಿಸಿ ಅಚ್ಚಳಿಯದೆ ನಿಂತಿಹುದು ಬೆಳೆದಿಹುದು ಕಟ್ಟಾಳುಗಳ ಬೆವರಿನಲ್ಲಿ ಬದುಕರಿಸಿ ಬಂದವರ ಕೈಚಾಚಿ ಅಪ್ಪಿಹುದು
/ನನ್ನ ಕನ್ನಡ ನಾಡಿದು/
ಮಾತಾಡ್ ಮಾತಾಡು ನೀ ಕನ್ನಡ ಎನ್ನಡ ಎಕ್ಕಡ ದವರಿಗೂ ಆಗಬೇಕು ಗಡಗಡ ಸಹಸ್ರ ಕೃತಿಗಳಲಂಕಾರದಿ ಮೆರೆಯುತ್ತಿರಲಿ ಕನ್ನಡ ಗಳಿಸುತ್ತಿರಲಿ ಮಾನ ಸಮ್ಮಾನಗಳ ಸದಾಭಿಮಾನವಿರಲಿ ಸಂಗಡ
/ನನ್ನ ಕನ್ನಡ ನಾಡಿದು /
ತಾನು ಮೇಲು ನೀನು ಕೀಳೆಂಬ ಕಿತ್ತಾಟದೀ ಗಳಿಸಲೇನಿಲ್ಲವೆಂದು ಅರಿಯಬೇಕಿದೆ ನಾವೂ-ನೀವೂ-ಅವರೂ ಹೊರಡಬೇಕಿದೆ ಸಮರಸದೀ ಸರ್ವರೂಳು ಸಮತೆಯ ಭಾವ ಜ್ಯೋತಿಯ ಉರಿಸಿ
/ನನ್ನ ಕನ್ನಡ ನಾಡಿದು/
ಮೆರೆಯುತ್ತಾ ಮೆರೆಸುತ್ತಾ ಕನ್ನಡದ ಕೀರ್ತಿ ಹಾಡುತ್ತಾ ಹೊಗಳುತ್ತಾ ನವ ಭಾವದ ರೀತಿ ಮನೆ-ಮನದಲ್ಲಿ ನಾಡಲುಮೆಯು ಉಕ್ಕಿಹುದು ಇದೇ ನೋಡು ಕರುಣೆಯ ಕರುನಾಡು
/ನನ್ನ ಕನ್ನಡ ನಾಡಿದು/
✍️-ನಾಗೇಂದ್ರ ಬಂಜಗೆರೆ, ಬಳ್ಳಾರಿ