ಬದುಕೆಂಬ ವೈರಾಗ್ಯವೂ ಪ್ರೇಮವೆಂಬ ಧ್ಯಾನವೂ
ಕಿರುಬೆರಳ ಸ್ಪರ್ಶಿಸದೆಯೇ ಉಳಿದು ಹೋದ ಪ್ರೇಮ
ಅವನ ಪಾಲಿಗೆ ವೈರಾಗ್ಯವಾದರೆ
ಅವಳ ಪಾಲಿಗೆ ಮಧುರ ಧ್ಯಾನ
ಸಂವತ್ಸರಗಳು ಕಳೆದು
ಇಬ್ಬರ ದಿಕ್ಕು ಬದಲಿಸಿವೆ
ಆಗೊಮ್ಮೆ ಈಗೊಮ್ಮೆ
ದೇವಳದ ಕೊನೆ ಮೆಟ್ಟಲ ಮೇಲೆ
ಪ್ರತ್ಯಕ್ಷವಾಗುವವಳನ್ನು
ಸೋಜಿಗದಿಂದ ನಿಟ್ಟಿಸುತ್ತಾನೆ
ಅವಳ ನಗು ಮಾಸಿಲ್ಲವೆಂದು
ಕುದಿಯುತ್ತಾನೆ
ಸಮೀಪಿಸದೆಯೂ ಕೇಳಿಸುತ್ತದೆ
ತಾವಿಬ್ಬರೂ ಸೇರಿ ಗುನುಗುತ್ತಿದ್ದ
ಹಾಡನ್ನೇ ಗುನುಗುತ್ತಿದ್ದಾಳೆಂದು
ಕಣ್ಣಲ್ಲಿ ಅವೇ ಕನಸು ತೇಲುತ್ತಿವೆ
ಅಗಾಧ ಚೆಲುವು ಅರಳಿ
ಅವಳ ನಲಿವು ಅಳಿಸಿಲ್ಲವೆಂದು
ಮರುಗುತ್ತಾನೆ
ಆ ದಿನಗಳಲ್ಲಿ
ಮರಳ ಮೇಲೆ ಗೀಚಿದ್ದೆಲ್ಲಾ
ಕಡಲ ಅಲೆಗಳು ಧುಮ್ಮಿಕ್ಕಿ
ಅಳಿಸಿ ಹೋಗುವವರೆಗೂ
ಒಲವಲೇ ಪೋಣಿಸಿದಂತೆ
ಅವನದ್ದೇ ಹೆಸರ
ಅವಳು ಗೀಚುತ್ತಿದ್ದುದು
ನೆನಪಿದೆ
ಅದೊಂದು ಕಾರ್ತಿಕ ಹುಣ್ಣಿಮೆ
ಚಲಿಸಿ ಬಂದಳು
ಸಾಲು ದೀಪಗಳ
ನಡುವಿಂದ
ರಂಗು ರಂಗೋಲಿಯಲಿ
ರೆಕ್ಕೆ ಬಿಚ್ಚಿದ ನವಿಲ ನಟ್ಟ
ನಡುವಿಂದ
ಅವನದೇ ಹೆಸರ ಅರಳಿಸಿ
ಅದರ ತುಂಬಾ ಬಣ್ಣ ತುಂಬಿದವಳು
ಅವಳೇ
ದಕ್ಕದ ಒಲವು
ಅವನಲಿ ವೈರಾಗ್ಯ ಮೂಡಿಸಿದರೆ
ಅವಳದವ ಧ್ಯಾನವಾಗಿಸಿದ್ದಾಳೆ
-ಡಾ.ಸಿ. ನಂದಿನಿ, ಬೆಂಗಳೂರು
—–