ಬೆಳಗಾವಿ/ಬಳ್ಳಾರಿ, ಡಿ.13: ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ತದನಂತರ ಬಿಮ್ಸ್’ನಲ್ಲಿ ಮೃತಪಟ್ಟಿದ್ದ ಬಳ್ಳಾರಿ ಜಿಲ್ಲೆಯ 4 ಜನ ಬಾಣಂತಿಯರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳಂತೆ 20 ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರು ಧನ್ಯವಾದ ತಿಳಿಸಿದ್ದಾರೆ.
ಈ ಕುರಿತು ಶುಕ್ರವಾರ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಬಳ್ಳಾರಿಯ ಬಿಮ್ಸ್’ನಲ್ಲಿ ಸರಣಿ ರೂಪದಲ್ಲಿ ಬಾಣಂತಿಯರು ಮೃತಪಟ್ಟಿದ್ದರು. ಈ ಬಗ್ಗೆ ವಸ್ತು ಸ್ಥಿತಿಯ ಪರಿಶೀಲನೆಗಾಗಿ ಶಾಸಕ ನಾರಾ ಭರತ್ ರೆಡ್ಡಿ ಬಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಮಾಹಿತಿ ಪಡೆದಿದ್ದರು.
ನಂತರ ನ.27 ರಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯಮಂತ್ರಿಗಳು ಭೇಟಿ ನೀಡಿದ ಸಂದರ್ಭ ಶಾಸಕ ನಾರಾ ಭರತ್ ರೆಡ್ಡಿ ಬಾಣಂತಿಯರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಮನವಿ ಮಾಡಿದ್ದರು. ಶಾಸಕರ ಮನವಿಗೆ ಸ್ಪಂದಿಸಿದ ಸಿಎಂ ಪರಿಹಾರ ಘೋಷಿಸಿದ್ದರು. ಸದ್ಯ ಜಿಲ್ಲೆಯ 4 ಜನ ಬಾಣಂತಿಯರ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ.