ಅನುದಿನ ಕವನ-೧೪೪೫, ಕವಯಿತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ಅಂಧತೆಯ ನಿಲುವು

ಅಂಧತೆಯ ನಿಲುವು

ಕರಿಯ ದಾರದ ಮದ್ಧ್ಯೆ
ಬಿಳಿಯ ಛಾಯೆ ಹೊರಬರದೆ
ಗಂಟಾಗಿ ಸಿಲುಕಿದೆ…

ಬಿಡಿಸಲಾರದ ಎಳೆಗೆ ಅಂಧತ್ವದ
ಕಪ್ಪು ಬೆಳಕ ಎಳೆಯು ಒಪ್ಪಿಕೊಳ್ಳದೆ , ಮನದಿಂದ ದೂರಸರಿದಿದೆ…..

ಜಗದ ಸೌಂದರ್ಯವನು ಮನದ ಉಸಿರೊಳಗೆನೆ ಸವಿಯುತಿದೆ, ಆದರೂ
ಬೆಳಕ ಸ್ಪರ್ಶವನು ಎಳ್ಳಷ್ಟೂ
ತನ್ನ ಎದೆಗೆ ಬಾಚಿಕೊಳ್ಳದೆ
ನಾಚಿಕೊಂಡು,, ಷರಾಬಿನ ಗುಟುಕನ್ನು ಗಂಟಲೊಳು
ಸೇವಿಸುತಿದೆ…..

ಆದರೂ ತಣಿಸಲಿಲ್ಲವೆ ಕಷ್ತವೆಂಬ ನೋವ ಹೆಬ್ಭಾರ?
ಒಡೆದು ಚೂರಾದ ಮೌನದ ಹೆಬ್ಭಾರಕೆ ಸತ್ತು ಬಿದ್ದಿದೆ
ಮೇಣದ ಜ್ವಾಲೆ….

ಇದಕೆ ಮೈ ತುಂಬಿಕೊಂಡ
ಹಣೆಯ ಕುಂಕುಮ ಬೆಳಕ
ಕಡೆಗೆ ತರಲು ದಿನವಿಡೀ ಶ್ರಮಿಸುತಿದೆ….

ಕಣ್ಣ ಕಾಡಿಗೆ ಹಚ್ಚುವ ಬೆರಳ
ಉಗುರು, ಹೊಟ್ತೆಕಿಚ್ಚಿಗೆ
ತನ್ನನು ತಾನು ಸೀಳಿಕೊಂಡು
ನಿಟ್ಟುಸಿರುಬಿಡುತಿದೆ….

ಸಾಮಾಜಿಕ ನೆಲೆಯ ಅಂಧತ್ವದ
ಸರಣಿಯಲಿ ಕಲೆಯು ಕೊರಗದೆ
ಕಲಾತ್ಮಕನ ಕೆತ್ತನೆಯ ಭಾವದಲಿ ಸೌಂದರ್ಯ ರೂಪ
ತಾಳಿದೆ….

ನೋಡುವ ದೃಷ್ಟಿಯಲಿ ಜಗದ
ಹೃದಯಕ್ಕೆ ಹಲವಾರು ಪ್ರಶ್ನೆ?
ಕುಹಕದಿ ಎತ್ತಿ ಅಂಧತೆಯ
ಮನವ ಬೇಸರಿಸಿದೆ….

ಅದೇ ಸೃಷ್ಟಿಯ ಮೆರಗು
ಒಳಿತು ಕೆಡಕುಗಳ ಮೇಳಕ್ಕೆ
ಕಲೆಯ ರಂಗು ಮಲಿನತ್ವಕ್ಕೆ
ಸಿಲುಕದೆ ,,ರಾಜಾರೋಷವಾಗಿ
ರಾಜ್ಯಭಾರ ಮಾಡುತಿದೆ….

ಆಗೋ ನೋಡಿ ನಮ್ಮನ್ನೆಲ್ಲ
ಸೃಷ್ಟಿಸಿದ ಕಲಾತ್ಮಕತೆಯ
ಮಣ್ಣಿನ ಬೊಂಬೆ ನಮ್ಮಿಂದಲೇ
ಮಾತಾಡಿ ರಂಜಿಸುತಿದೆ
ಇದಕೆ ಯಾರ ಹಂಗೂ ಇಲ್ಲ……

-ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ