ಅನುದಿನ ಕವನ-೧೪೪೬, ಹಿರಿಯ ಕವಯಿತ್ರಿ: ಎಂ. ಆರ್ ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ಎಷ್ಟೊಂದು ಮುಖಗಳ ನಡುವೆ

ಎಷ್ಟೊಂದು ಮುಖಗಳ ನಡುವೆ

ಇಲ್ಲಿ ಎಲ್ಲರಿಗೂ `ಎರಡು ಮುಖ’!
`ಹೊರ ಮುಖ’, `ಒಳ ಮುಖ’
ಹೊರಮುಖ ಸದಾ ನಗು ಸೂಸುತ್ತ
ಖುಷಿಯಲ್ಲಿ ಮಿಂದೇಳುತ್ತದೆ
ಆತ್ಮವಿಶ್ವಾಸ, ಮಾತಿನ ಸೊಗಸು,
ಜೋರು ನಗು, ಆಹಾ!

ಮುಚ್ಚಿದ ಬಾಗಿಲುಗಳಲ್ಲಿನ ಒಳಮುಖ
ಭಾವುಕವಾಗಿ  ಬಿಕ್ಕುತ್ತದೆ
ಎರೆದುಕೊಳ್ಳುವಾಗ  ಹರಿದದ್ದು
ನೀರೋ, ಕಣ್ಣೀರೋ?
ಹಾಸಿಗೆಯ ದಿಂಬಿಗೆ ಒರಗಿದಾಗ?
ನಾವೇ ನಮಗೆ ಉತ್ತರಿಸಿಕೊಳ್ಳಬೇಕು

ಕೆಲಸ ಮಾಡುತ್ತಲೋ, ಬರೆಯುತ್ತಲೋ
ಮಾತನಾಡುತ್ತಲೋ ತಮ್ಮೊಳಗನ್ನು
ತಾವೇ  ಮುಚ್ಚಿಟ್ಟುಕೊಳ್ಳುತ್ತ
`ಒಳಮುಖ’ `ಹೊರಮುಖ’ ಯಾವುದೆಂದೇ
ತಿಳಿಯದೆ  ತೊಳಲುತ್ತೇವೆ

ಗೊಂದಲದಲ್ಲೊಮ್ಮೊಮ್ಮೆ `ಒಳಮುಖ’
`ಹೊರಮುಖ’ವಾಗಿ, ಕೆಲವು ಅರ್ಧವಾಗಿ,
ಸೊಟ್ಟಗಾಗಿ, ವಿಕೃತಿಯಾಗಿ   ಹೊಮ್ಮಿ
ನೂರಾರು `ಫೇಸ್ ಬುಕ್ಕಿನ’ ಫೇಸ್ ಗಳಾಗಿ
ದಿಕ್ಕೆಟ್ಟು, ದಿಕ್ಕೆಡಿಸುತ್ತವೆ!

-ಎಂ ಆರ್ ಕಮಲ, ಬೆಂಗಳೂರು
—–