ಬುದ್ಧ
ಪ್ರತಿಮೆಗೆ ಪುಷ್ಪಗಳ ತೊಡಿಸಿ
ಅಹೋರಾತ್ರಿ ಪಠಿಸಿ ಪೂಜಿಸಿ
ಪುನಃ ನಾಳೆಗೆ
ಭೂ ಕಬಳಿಕೆ, ಹತ್ಯೆ
ಅನಾಚಾರಗಳನೆಸಗುತ
ಪ್ರೀತಿ ಕರುಣೆಗಳನೆ ಮರೆತರೆ
ದಕ್ಕಿಸಿಕೊಳ್ಳಲು ಆಗದು
ಬುದ್ಧನ ಮುಗ್ಧತೆಯ ಚೆಲುವು!
ಪದಗಳನು ಪೋಣಿಸಿ, ಮೆರೆಸಿ
ಪುಸ್ತಕದ ಪುಟಗಳನು ತುಂಬಿಸಿ
ದಾಯಾದಿ, ಬಂಧು, ಸಹಮಿತ್ರರೊಡನೆ
ಮೈತ್ರಿಯನು ತೋರದೆ;
ವೈರವನೇ ಸಾಧಿಸಿದರೆ
ಪಡೆದುಕೊಳ್ಳಲು ಆಗದು
ಬುದ್ಧನ ನಗುವಿನ ಗೆಲುವು!
ಸನ್ಮಾರ್ಗದ ಉಪದೇಶಗಳನು
ಘಂಟಾಘೋಷವಾಗಿ
ತಿರುತಿರುವಿ ಅರುಹಿ;
ವೇದಿಕೆಯಿಂದಿಳಿಯುತ್ತಿದ್ದಂತೆ
ಅಲ್ಲಿಂದಿಲ್ಲಿಗೆ ಇವರಿಂದವರಿಗೆ
ತಂಟೆ ತಕರಾರುಗಳನ್ನೆಬ್ಬಿಸಿ
ಸತ್ಯ ಶಾಂತಿಗಳ ಹೂತು ಬಿಟ್ಟರೆ
ಹೊತ್ತಿಸಿಕೊಳ್ಳಲು ಆಗದು
ಬುದ್ಧನ ಬೆಳಕಿನ ಅರಿವು!
ಬರೀ ಒಂದು ದಿನದ ಕೆಲಸವಲ್ಲ
ಸ್ಥಾಪಿಸಿಕೊಳ್ಳುವುದು ಬುದ್ಧನನ್ನು;
ಅಷ್ಟು ಸುಲಭದ ಮಾತೇ ಅಲ್ಲ
ಆವಾಹಿಸಿಕೊಳ್ಳುವುದು ಬುದ್ಧನನ್ನು!
ಬುದ್ಧ:
ಆಂತರ್ಯವನು
ಎಚ್ಚರಿಸುವ ಶಿಶು;
ಇಡೀ ಬದುಕನು
ಪರೀಕ್ಷಿಸುವ ಗುರು!
-ಕಿರಣ್ ಗಿರ್ಗಿ, ಮೈಸೂರು
—–