ಅನುದಿನ ಕವನ-೧೪೫೦, ಕವಿ: ಮಾಣಿಕ ನೇಳಗಿ ತಾಳಮಡಗಿ, ಬಾಲ್ಕಿ, ಬೀದರ್ , ಕವನದ ಶೀರ್ಷಿಕೆ: ನಮ್ಮ‌ಅಂಬೇಡ್ಕರ್

ನಮ್ಮ ಅಂಬೇಡ್ಕರ

ಅಂಬೇಡ್ಕರರು ದೇವ ದೈವಕಿಂತಲೂ ಮಿಗಿಲು
ತೆರೆದರೆಮಗಾಗಿ ಅವಕಾಶಗಳ ಹೆಬ್ಬಾಗಿಲು
ಶೋಷಿತರ ಪ್ರಗತಿಗೆ ದುಡಿದರು ಹಗಲಿರುಳು
ಕಾರ್ಯವರಿತು ಹೂಮಳೆಗರೆಯಿತು ಮುಗಿಲು

ಕಾಣದ ದೇವರುಗಳು ನಮಗೇತಕೆ ಬೇಕು ?
ಮೈಲಿಗೆಯೆನ್ನುವವರನು  ತೊರೆಯಬೇಕು
ಮೂಢನಂಬಿಕೆಗಳತ್ತ ಕತ್ತಿ ಬೀಸಲೇಬೇಕು
ಬಾಬಾ ಸಾಹೇಬರ ನಾಮವೆಮಗೆ ಬೇಕು

ಸಂವಿಧಾನವೇ ನಮಗೆ ವೇದ ಶಾಸ್ತ್ರಆಗಮ
ಸಂವಿಧಾನವೆಂದಿದೆ ಮಾನವರೆಲ್ಲರು ಸಮ
ನಮಗೇತಕೆ ಬೇಕು  ಹಲವು ದೇವಗಳ ನಾಮ ?
ಅರಿತಿರುವೆವು ಈಗ ವಿಷ ನಾಲಿಗೆಗಳ ಮರ್ಮ

ನಮ್ಮ ಹಕ್ಕು ಕರ್ತವ್ಯಕೆ ಒತ್ತು ನಾವು ನೀಡುವ
ಹಿತ ಶತ್ರುಗಳ ಕುಹಕ ಬುದ್ದಿಗೆ ಕೊನೆಹಾಡುವ
ಬುದ್ಧ ಬಸವ ಅಂಬೇಡ್ಕರರ ಮಾರ್ಗದಿ ಸಾಗುವ
ಅಧಿಕಾರದ ಗದ್ದುಗೆಯತ್ತ ದಾಪುಗಾಲು ಹಾಕುವ

-ಮಾಣಿಕ ನೇಳಗಿ ತಾಳಮಡಗಿ, ಬಾಲ್ಕಿ, ಬೀದರ್ ಜಿ.
—–