ಅನುದಿನ ಕವನ-೧೪೫೧, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ:ಎದೆಯಲ್ಲಿ ಮುಳ್ಳು ಮುರಿದ ಸದ್ದು

ಎದೆಯಲ್ಲಿ ಮುಳ್ಳು ಮುರಿದ ಸದ್ದು

ಹೆಚ್ಚು ಮಾತನಾಡಿಸಬೇಡ
ನೀನೇ ಗೀರಿದ ಗಾಯದ ನೋವನ್ನು
ನಿನ್ನೆದುರು ಹರವಿಬಿಟ್ಟೆನೆಂಬ ಭಯ…

ಬಹಳ ಹೊತ್ತು ಜೊತೆಗಿರಬೇಡ
ಬದುಕುವ ಆಸೆ ಚಿಗಿತುಕೊಂಡು
ನೀನು ಬೇಕೇ ಬೇಕೆಂಬ ಹಠವನ್ನು
ಹೇಗೆ ಸಂತೈಸಲಿ…..

ಹೂತ ನೆನಪುಗಳ ಗೋರಿ
ಮತ್ತೆ ಅಗೆಯಬೇಡ
ಹಿಂದೆ ಮಾಡಿದ ಆಣೆ-ಪ್ರಮಾಣಗಳು
ಅಣಕಿಸುವಾಗ
ಎದೆಯಲ್ಲಿ ಮುಳ್ಳು ಮುರಿದ ಸದ್ದು…..

ಅಳಬೇಡ ಕಣೋ ಎಂಬ
ಮಾತನ್ನಂತೂ ಆಡಲೇಬೇಡ
ಅದೊಂದೇ ಆಸರೆ ನನಗೆ
ದಯವಿಟ್ಟು ಅದನ್ನೂ ಕಿತ್ತುಕೊಳ್ಳಬೇಡ…..

ಕಾರಣ ಕೂಡ ಕೊಡದೆ
ಬಿಟ್ಟು ನಡೆದವಳೇ….
ನಿನ್ನ ಬದುಕಿನ ಜೋಳಿಗೆಯಲಿ
ಖುಷಿ ಖಾಲಿಯಾಗದಿರಲಿ
ಸಾವಿರ ನೋವ ಮರೆಸುವ
ಆ ನಿನ್ನ ಮೊಗದ ನಗೆ ಖಾಯಮ್ಮಾಗಿರಲಿ!

-ನಾಗೇಶ್ ಜೆ. ನಾಯಕ, ಸವದತ್ತಿ
—–