ಹೆಚ್ಚುತ್ತದೆ ಏಕೆ
ನಿಮ್ಮ ಅಸಹನೆಯ ಆಳ?
ಒಡೆಯುತ್ತದೆ ಏಕೆ
ನಿಮ್ಮ ದ್ವೇಷದ ಕಟ್ಟೆ?
ಶತಮಾನಗಳ ಅವಮಾನ
ಸಹಿಸಿದ ಬದುಕಿಗೆ
ನಕ್ಕರೆ ಎಷ್ಟೊಂದು ದೂರುಗಳು!
ಅತ್ತರೆ ಎಷ್ಟೊಂದು ಗುದ್ದುಗಳು!
ನಿಮ್ಮ ತಿರಸ್ಕಾರದ ನೋಟ
ತಿವಿಯುತ್ತದೆ ಏಕೆ?
ಬಗ್ಗಿದ ನಡುವ ನೆಟ್ಟಗಾಗಲು
ಬಿಡುವುದೇ ಇಲ್ಲ
ದುಡಿವ ನೆಲವೂ ನಮ್ಮದಲ್ಲ
ಹೆಣವಾದರೆ ಮಣ್ಣ ಮೇಲೂ
ನಮ್ಮ ಹೆಸರಿಲ್ಲ…
ಕೂಸುಗಳೆದೆಗೆ
ಹಗೆಯುಸಿರನು ತುಂಬಿ
ನಾಳೆಯ ಕನಸುಗಳಿಗೂ
ನಿದಿರೆ ಇಲ್ಲ…
ಹಿಡಿತವನ್ನು
ಬಲವಾಗಿಸುವತ್ತಲೇ
ನಿಮ್ಮ ಚಿತ್ತ ಇದೆಯೇಕೆ?
ಸದ್ದಿಲ್ಲದೇ ಕೊಳ್ಳೆ ಹೊಡೆದು,
ಕಾಲವನು ನೆಪವಾಗಿಸಿ
ತುಳಿದು,
ಮತ್ತೀಗ,
ನಮ್ಮಿಷ್ಟದ ಕೂಳಿಗೂ
ಹೊಲಸಿನ ಹೆಸರು ಹಚ್ಚುತ್ತೀರೇಕೆ?
ನೂರು ಗ್ರಾಂ ಪ್ರೀತಿ ಕೊಟ್ಟು
ನೋಡಿ,
ನಾವೂ ಎದೆಭಾರಗಳ
ಹಗುರಾಗಿಸಿಕೊಳ್ಳಬೇಕು
ಬದುಕು ಕೊಟ್ಟ
ತಂದೆಯ ಹೆಸರ
ನೆನೆಯುತ್ತೇವೆ ಬಿಡಿ,
ಸ್ವಾಭಿಮಾನದ ನಡೆ ನಮ್ಮದಾಗಬೇಕು…
-ರಮ್ಯ ಕೆ ಜಿ ಮೂರ್ನಾಡು, ಕೊಡಗು
(ಮಂಡ್ಯದಲ್ಲಿ ಜರುಗಿದ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಾಚಿಸಿದ ಕವನವಿದು!)