ಏಸು ಬಂದ
ಏಸು ಬಂದ ನಮ್ಮೂರಿಗೆ
ಉದ್ದನೆಯ ನಿಲುವಂಗಿ
ನೀಳಗೂದಲು ನಿಡಿದಾದ ಗಡ್ಡ
ಬಾಗಿದ ಮೀಸೆ , ಕಂದುಗಣ್ಣು
ಹೆಗಲಿಗೆ ಕಂಬಳಿ ಬಗಲಿಗೆ ಕುರಿಮರಿ ಕೈಗೋಲು ಬೀಸುತ್ತಾ
ಊರ ತುಂಬಾ ಓಡಾಡಿದ
ಅಂಗಾಲು, ಕೈಗಳಿಗೆ ಜಡಿದ ಮೊಳೆಗಳೆಲ್ಲಿ?
ಒಸರಿದ ರಕ್ತವೆಲ್ಲಿ ? ಶಿಲುಬೆ ಹೊತ್ತು ಬಾವು ಬಂದಿರುವುದೆ ಬೆನ್ನಿಗೆ? ಪೆಟ್ಟು ತಿಂದು ಊದಿರುವುದೆ ಕೆನ್ನೆ? ಎಲ್ಲಿ ಮುಳ್ಳಿನ ಕಿರೀಟ ಎಂದು ಯಾರೂ ತನಿಖೆ ಮಾಡಲಿಲ್ಲ.
ಅಬ್ಬಾ ಎಂಥಾ ಮಂದಹಾಸ
ತೊರೆಯ ನೀರು ಕುಡಿದು
ಮರಿಗೆ ಚಿಗುರೆಲೆ ಉಣಿಸಿ
ಮೌನ ಮುರಿದು
ಮಳೆ-ಬೆಳೆ ಕುಶಾಲು ಮಾತಾಡಿ
ಈ ದಿನಗಳಲ್ಲಿ ಉಪ್ಪೂ ಸಪ್ಪೆ
ಎಂದು ಗೊಣಗಿ
ಪಕ್ಕದೂರಿಗೆ ದಾರಿ ಕೇಳಿದ…
ಸುಮ್ಮನಿರಲಾರದೆ ಮಂದಿ
ಏಸು ಬಂದವನೆ ಎಂದು ಬೊಬ್ಬಿಟ್ಟು
ಆರತಿ ಬೆಳಗಿ ಅಡ್ಡ ಬಿದ್ದು
ತೆಂಗು ಬಾಳೆ ಹೊರಿಸಿ ಕುಳ್ಳಿರಿಸಿ
ಕಷ್ಟ ಸುಖ ಹಂಚಿಕೊಂಡು
ಅತ್ತು ಕರೆದರು!
ಏಸು ಬಾರಿ ಏಸು
ಹೇಳಿದರೂ ಕೇಳದೆ
ಮೇರಿಯ ಮಗನೆಂದು ಸಾರಿ
ಅಡಿಗಡಿಗೂ ಹೂವ ತೂರಿ
ಹೊಳೆ ದಾಟಿಸಿ ಹಿಂದಿರುಗಿ
ನೆನಪಿಗೆಂದು ಕಲ್ಲು ನೆಟ್ಟು, ಬೊಟ್ಟಿರಿಸಿ
ಏಸುಗಲ್ಲು ಎಂದು ಹೆಸರಿಟ್ಟರು
-ಸವಿತಾ ನಾಗಭೂಷಣ, ಶಿವಮೊಗ್ಗ