ಅನುದಿನ ಕವನ-೧೪೫೬, ಕವಿ: ಟಿ.ಪಿ. ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ: ಟಿ.ಪಿ. ಉಮೇಶ್, ಹೊಳಲ್ಕೆರೆ

ಹೂಗಳೆಲ್ಲ ಅರಳ್ಯಾವೊ

ಮಳೆ ಹೊಡೆತಕೆ ಸೀಮೆ ಭೂಮಿಯೆಲ್ಲ
ಅದುರಿ ಚದುರಿ ಮುದುರಿ ಹೊದರಿ
ಮಣ್ಣ ಕಣಕಣಗಳು ಹುದುಗೆದ್ದು ಪುನುಗಿ
ಬಯಲ ಬಿಲ ಹೊಲ ನೆಲದಲ್ಲು
ಕಾದ ಬೀಜ ಗಿಡ ಗಂಟಿ
ಬೇಲಿ ಬಳ್ಳಿ ಚಿಗುರಿ ನಿಗುರಿ
ಕಲ್ಲ ಸಂದಿಗೊಂದಿಗಳಲ್ಲಿ ಹಸಿರು ಹರಡಿ
ಹೂಗಳೆಲ್ಲ ಅರಳ್ಯಾವೊ

ನೆಲದ ಮೊಳಕೆ ಮಣ್ಣು ಅರಳಿ ಹೊರಳಿ
ಚಿಗಿತು ಬೆಳೆತು ಕಲ್ಲು ಮುಳ್ಳು ಸೋಕಿ
ಬೆಟ್ಟಗುಡ್ಡ ತಾಗಿ ಏರಿ ಹಾರಿ ತೋರಿ
ಗಾಳಿ ತಡಿದು ಹಿಡಿದು ತೇಲಿ
ಮೇಲಿ ಜೋಲಿ ಹೊಡೆದು ಹೊಳೆದು
ಸುರಳಿ ಮೋಡ ಮೋಡದಲ್ಲು
ಹೂಗಳೆಲ್ಲ ಅರಳ್ಯಾವೊ

ಬೆಳಗಿ ಹೊಳೆದು ದಿನದಿ ಮಣಿದು
ಸಂಜೆ ತಣಿದು ಬಂದ ತಂದ
ಬಾಳ ರವಿಯ ಮುಖದಲ್ಲಿ
ಇರುಳ ಅರಳಿ ತರಳಿ ತಾರಾ ಲೋಕ
ಒತ್ತಿ ಸುತ್ತಿ ಧರಣಿಯೊಪ್ಪಿ ಅಪ್ಪಿ
ಕುಣಿಯೊ ತಣಿಯೊ ಮಣಿಯೊ
ಶಶಿಯಂದ ಚಂದದಲ್ಲು
ಹೂಗಳೆಲ್ಲ ಅರಳ್ಯಾವೊ

ಊರ ಕೇರಿ ಮನೆ ಮಾಡ ಚಾಚಿ ಬಾಚಿ
ಮನದ ಘನದ ತನದ ಮದದ
ಸೊಕ್ಕ ಬಿಕ್ಕ ತರಿದು ತುರಿದು
ಅಳೆದು ಕಳೆದು ತಾಳೆ ತೆಗೆದು
ಏರು ಇಳಿವು ಕಪ್ಪು ಬಿಳಿಪು
ಕಾಮನೊಂದು ಮಾಡಿ ರೂಪ ತಿಟ್ಟ ತೀಡಿ
ಹೂಗಳೆಲ್ಲ ಅರಳ್ಯಾವೊ

ದೇಶ ಭಾಷೆ ಗಡಿಗಳಡಗಿ
ವಿಶ್ವವೆಲ್ಲ ವಂದೆ ಕೂಗ ಹಾಕಿ
ಹೊಳೆ ಹಳ್ಳ ನದನದಿಗಳೇಕವಾಗಿ
ಕಡಲಮಡಿಲ ಕೂಡಿ ಹಾಡಿ
ಜಗದೆಲ್ಲೆ ಭೇದ ಬಗಿದು ಹುಗಿದು
ಅವನು ಆಕೆ ಇವನು ಈಕೆ
ಒಂದೆ ಕರುಳ ತೂಕವಾಗಿ
ಒಂದೆ ಬಳ್ಳಿ ಕುಣಿಕೆಯಾಗಿ
ಹೂಗಳೆಲ್ಲ ಅರಳ್ಯಾವೊ

ಮಳೆಯ ತಪದಿ ಸಿಡಿಲ ಹಾಡು
ಮಿಂಚ ನೃತ್ಯ ಸಾಕ್ಷಿ ಆದಿತ್ಯ
ಧರೆಯ ಚಿತ್ತ ಉನ್ಮತ್ತ ಬಾನಿನತ್ತ
ದಿವ್ಯ ಸ್ಮೃತಿಯ ರೂಹಿನತ್ತ
ಭಗದ ಭವದ ಭರತ ಉನ್ಮತ್ತಿನತ್ತ
ಮತ್ತೆ ಕಡೆದ ಹದದ ಲೋಕದತ್ತ
ಬಿರಿದು ಬಿಗಿದು ಜಿಗಿದು ಚಿಗಿದು
ನಗ್ನ ರುಗ್ಣ ಭಗ್ನವಾಗಿ
ಏಕತ್ರ ಜೀವ ಜಾವ ಛಾವಣಿ ಗೆಲ್ಲ ಗೆಲ್ಲ
ಹೂಗಳೆಲ್ಲ ಅರಳ್ಯಾವೊ


-ಟಿ.ಪಿ. ಉಮೇಶ್, ಹೊಳಲ್ಕೆರೆ
—–