ಬಳ್ಳಾರಿ, ಡಿ. 26:ದೇಶದಲ್ಲಿ 1 ಕೋಟಿ, ವಿಶ್ವದಲ್ಲಿ 21 ಕೋಟಿ ಬಾಲಕಾರ್ಮಿಕರಿದ್ದು, ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಪ್ರತಿಯೊಬ್ಬರೂ ಬದ್ಧರಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜೇಶ್ ಹೊಸಮನಿ ಅವರು ತಿಳಿಸಿದರು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಗುರುವಾರ ನಡೆದ ಕಾರ್ಮಿಕ ಇಲಾಖೆ, ವ್ಯಾಪಾರಿ – ವಾಣಿಜ್ಯೋದ್ಯಮಿಗಳ ಸೌಹಾರ್ದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಸಮಸ್ಯೆಯನ್ನು ಪರಿಹರಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು, ಕಾರ್ಮಿಕ ಇಲಾಖೆ ಮತ್ತು ವ್ಯಾಪಾರ – ವಾಣಿಜ್ಯೋದ್ಯಮಿಗಳು ಪರಸ್ಪರ ಸಹಕಾರದಿಂದ ಇದ್ದಲ್ಲಿ ಮಾತ್ರ ಬಾಲಕಾರ್ಮಿಕ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಸಾಧ್ಯ ಎಂದು ಹೇಳಿದರು. ಬಾಲಕಾರ್ಮಿಕ ಪದ್ಧತಿ ದೊಡ್ಡ ಪಿಡುಗಾಗಿದೆ. ಶಿಕ್ಷಣದ ಮೂಲಕವೇ ಈ ಸಮಸ್ಯೆಗೆ ಪರಿಹಾರ ಸಾಧ್ಯ. ಕಾರಣ ಅಧಿಕಾರಿಗಳು ಮತ್ತು ವ್ಯಾಪಾರಿಗಳು – ಉದ್ಯಮಿಗಳು ಪರಸ್ಪರ ಮಾನವೀಯತೆಯ ಆಧಾರದಲ್ಲಿ ಸಮಸ್ಯೆಗೆ ಪರಿಹಾರಗಳನ್ನು ಕಂಡುಹಿಡಿಯಬೇಕು ಎಂದು ಮನವಿ ಮಾಡಿದರು. ಪ್ರತಿ ಮೂರು ಅಥವಾ ಆರು ತಿಂಗಳಿಗೆ ಒಮ್ಮೆ ಇಲಾಖೆಯ ಮಾಹಿತಿಯನ್ನು – ಹೊಸ ವಿಚಾರಗಳನ್ನು ವ್ಯಾಪಾರಿಗಳು – ಉದ್ಯಮಿಗಳಗೆ ತಿಳಿಸುವ ಕೆಲಸ ಆಗಬೇಕು. ಇಲ್ಲವಾದಲ್ಲಿ ಸಮಸ್ಯೆಯ ಪರಿಹಾರಕ್ಕೆ ಬದಲಾಗಿ, ಸಮಸ್ಯೆ ಮತ್ತಷ್ಟು ದೊಡ್ಡದಾಗಿ ಸಜೀವವಾಗಿರಲಿದೆ. ಕಾರಣ ಕಾರ್ಮಿಕ ಇಲಾಖೆಯು ಕಾಲ ಕಾಲಕ್ಕೆ ಸಭೆ ನಡೆಸಬೇಕು ಎಂದರು. ಕಾರ್ಮಿಕ ಅಧಿಕಾರಿ ಸಿದ್ದಪ್ಪ ಖೈನೂರ್ ಅವರು, ಕಾರ್ಮಿಕ ಇಲಾಖೆಯು 24 ಕಾಯ್ದೆಗಳನ್ನು ಜಾರಿ ಮಾಡುತ್ತಿದ್ದು, ಒಂದಿಲ್ಲ ಒಂದು ಕಾಯ್ದೆ ವ್ಯಾಪ್ತಿಯಲ್ಲಿ ವ್ಯಾಪಾರಿಗಳು – ಉದ್ಯಮಿಗಳು ಗುರುತಿಸಿಕೊಳ್ಳುತ್ತಾರೆ. ಬಾಲಕಾರ್ಮಿಕ ಪದ್ಧತಿಯನ್ನು ನಿವಾರಣೆ ಮಾಡಲು ವ್ಯಾಪಾರಿಗಳು ಮತ್ತು ಉದ್ಯಮಿಗಳು ಸಹಕಾರ ನೀಡಬೇಕು ಎಂದು ಹೇಳಿದರು.
ಬಾಲಕಾರ್ಮಿಕ ನಿಯಂತ್ರಣ ಯೋಜನಾ ಅಧಿಕಾರಿ ಮೌನೇಶ್ ಅವರು, ಮಕ್ಕಳ ಹಕ್ಕುಗಳನ್ನು ಜಾರಿ ಮಾಡುವಲ್ಲಿ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಮಕ್ಕಳನ್ನು ಸಾಕಲಾಗದ ಪೋಷಕರು – ಪಾಲಕರು ಆ ಮಾಹಿತಿಯನ್ನು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ)ಗೆ ಸಲ್ಲಿಸಿದಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು. ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ. ರಾಮಚಂದ್ರ, ಹೋಟಲ್ ಮಾಲೀಕರ ಸಂಘದ ಪೋಲಾ ವಿಕ್ರಮ, ವ್ಯಾಪಾರಿಗಳ ಪರವಾಗಿ ಜೆ. ರಾಜೇಶ್, ಲಕ್ಷ್ಮೀನಾರಾಯಣ, ಎಸ್.ಎಂ. ವೇಣುಗೋಪಾಲ್ ಇನ್ನಿತರರು ಕಾರ್ಮಿಕರ ಇಲಾಖೆ ಮತ್ತು ಕಾಯ್ದೆಗಳ ಕುರಿತು ಪ್ರಶ್ನೆಗಳನ್ನು ಕೇಳಿ, ಉತ್ತರಗಳನ್ನು ಪಡೆದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಅವರು ವಂದನಾರ್ಪಣೆ ಸಲ್ಲಿಸಿದರು. ವಿವಿಧ ಸಂಘಟನೆಗಳ ಪದಾಧಿಕಾರಿಗಳ – ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.