ನಾ ಓದಿದ ಪುಸ್ತಕ, ಕವನ ಸಂಕಲನ: ಕವಯಿತ್ರಿ ಭವ್ಯ ಕಬ್ಬಳಿ ಅವರ ‘ದೇವರ ತೇರಿಗೂ ಗಾಲಿಗಳು ಬೇಕು’, ಕೃತಿ ಪರಿಚಯ: ಶಾಂತ ಜಯಾನಂದ, ಬೆಂಗಳೂರು

ಭವ್ಯ ಕಬ್ಬಳಿಯವರ ಕಾವ್ಯ ‘ಕಟ್ಟುವ’ ಪರಿಗೆ ಸೋಲುತ್ತೇನೆ.
ಒಂದೇ ಗುಟುಕಿಗೆ ಓದಿಸಿಕೊಂಡ ‘ ದೇವರ ತೇರಿಗೂ ಗಾಲಿಗಳು ಬೇಕು’ ಓದಿದಾಗ ಅನಿಸಿದ್ದು. ತಮ್ಮ ಮೊದಲ ಕವನ ಸಂಕಲನವೆಂದು ಹೇಳಿ ಅವರು ಪುಸ್ತಕವನ್ನು ನನ್ನ ಕೈಗಿತ್ತಾಗ, ಓದುವ ಎಂದು ಬದಿಗಿಟ್ಟಿದೆ, ಪುಸ್ತಕ ಕೈಗೆತ್ತಿಕೊಂಡ‌ ಮೇಲೆ ಒಂದಿಷ್ಟೂ ವಿರಾಮವನ್ನು ಕೊಡದೆ ಪೂರ್ತಿ ಓದಿಸಿಕೊಂಡ ಕವನ ಸಂಕಲನ.

ಕೋಣೆಯಲ್ಲೊಂದು ದೀಪ ಹಚ್ಚಿಟ್ಟು
ಕಿಟಕಿಯಿಂದ ತೂರಿ ಬರುವ ಸಣ್ಣ
ಬೆಳಕಿನ ಬಾಣಗಳಿಗೆ
ಮೊಗವ ಚಾಚಿ ಕಾಯುತ್ತಿದ್ದೇನೆ,
ಹನಿಯ ಹಿಡಿಯುವ ಹಂಬಲದಿ
ಬೊಗಸೆ ಹಿಡಿದು ಕರೆಯುತ್ತಿದ್ದೇನೆ.

ಎಂಬಲ್ಲಿ ಅವರ ಕನಸು ಕವಿತೆ ಕಟ್ಟುವ ಹಂಬಲ ಅನಾವರಣಗೊಳ್ಳುತ್ತದೆ,
ಇನ್ನೂ ‘ದೇವರ ತೇರಿಗೂ ಗಾಲಿಗಳು ಬೇಕು’ ಹೇಳುವುದನ್ನೆಲ್ಲಾ ಈ ಕಿರುಗವಿತೆಯ ಸಾಲುಗಳಲ್ಲಿ ಹೇಳಿದ್ದಾರೆ.

‘ಧರ್ಮಕ್ಕೊರಗಿದ
ನೆರಳ ದೂರುವರು
ಕಡುಕತ್ತಲೆ ಎನ್ನುವರು’

ವಚನಗಳ ಸಾಲಿನಂತೆ ಹೇಳ ಬೇಕಾದುದನ್ನು ಹೇಳಿಯಾಗಿರುತ್ತದೆ.
ಹಾಗೇ ‘ನನ್ನೂರಿನ ಗೌರಕ್ಕ‘ ಗದ್ಯ-ಪದ್ಯವಾದರೂ ಅಂತಃಕರಣ ತಲುಪುತ್ತದೆ, ‘ಕವಿ ಕವಿತೆ’ ಯ ಪದ್ಯಗಳು ಕವಿತೆಯ ಜಾಡ ಹಿಡಿದು ಹೊರಟು ಕವತೆಯಾಗುವ ರೀತಿ ಕವಿಯ ಭಾವ, ಆಧ್ಯಾತ್ಮ ತಧ್ಯಾತ್ಮವಾಗುತ್ತದೆ.

‘ ದಕ್ಕುವುದಷ್ಟೇ ದೇಹಕ್ಕೆ
ನೆಲ ಮಾಳಿಗೆಯ ಮಣ್ಣು
ಕೊನೆಗೆ ‘

‘ಮಲಗಿಸುವೆನು ಪುಟ್ಟ ಮಗುವ ಬಿಳಿ ಹಾಳೆಯ ಮಡಿಲಲ್ಲಿ’ ಈ ಕವಿತೆ ಸೃಷ್ಟಿಯಾಗುವ ಪರಿ,
ಇಲ್ಲಿ ‘ಬದುಕು’ ‘ದೇವರು’ ‘ಪ್ರೇಮ – ಕಾಮ’ ಕವಿ ಕವಿತೆಯ ಅನಾವರಣ.

‘ಸೊಕ್ಕು ಚೂರು ಹೆಚ್ಚೇ ನಿನಗೆ’

ಕವಿತೆ ನಿನ್ನನ್ನು ಬಿಟ್ಟು ಹೋಗುವಷ್ಟು
ಸೊಕ್ಕು ಚೂರು ಹೆಚ್ಚೇ ನಿನಗೆ,
ಹೆಣ್ತನಕ್ಕೆ ಹಿಡಿದ ಕನ್ನಡಿ ಎಂದೇ ಹೇಳಬಹುದು, ಬಿಟ್ಟು ಹೋಗುವಷ್ಟು ಸೊಕ್ಕಿನ ಒಂದು ಹೆಣ್ತನದ ಅಹಮ್ಮಿಕೆಯು ಕಾಣುತ್ತದೆ.

ಕಾವ್ಯವನ್ನು ಬರೆಯುವಾಗ ಜಗತ್ತನ್ನು ಮಾನವೀಯತೆಯ ಸೆಲೆಯಲ್ಲಿ ಕಾಣುವ ಕವಿ ಭವ್ಯ ಅವರ ಹೆಜ್ಜೆಗಳು ಸ್ಥಿರವಾಗಲಿ, ಅವರ ಕಾವ್ಯ ಪಯಣ ಚಂದಕ್ಕೆ ಸಾಗಲಿ.

-ಶಾಂತ ಜಯಾನಂದ, ಬೆಂಗಳೂರು